ಮಂಗಳೂರು: ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ನಾಲ್ಕನೇ ಜೆಎಂಎಫ್‌ಸಿ ನ್ಯಾಯಾಲಯ ಆರೋಪಿಗೆ 6 ಕೋಟಿ ರೂ. ದಂಡ ವಿಧಿಸಿ ಆದೇಶಿಸಿದೆ. ಮಂಗಳೂರಿನ ಬಲ್ಲಾಳ್‌ಬಾಗ್ ನಿವಾಸಿ ಅನಿಲ್ ಹೆಗ್ಡೆ ಎಂಬವರಿಗೆ ಈ ದಂಡ ವಿಧಿಸಲಾಗಿದೆ.
ಅನಿಲ್ ಹೆಗ್ಡೆ ಅವರು ಮಂಗಳೂರಿನ ಪದವಿನಂಗಡಿಯ ಮುಗ್ರೋಡಿಯ ಡ್ಯಾನಿ ಆಂಟನಿ ಪಾವ್ಲ್ ಅವರಿಗೆ 5,15,73,798 ರೂಪಾಯಿಯನ್ನು ವ್ಯವಹಾರಕ್ಕೆ ಸಂಬಂಧಿಸಿದಂತೆ ಪಾವತಿ ಮಾಡಬೇಕಾಗಿತ್ತು. ಈ ಮೊತ್ತವನ್ನು ಡ್ಯಾನಿ ಅವರಿಗೆ ನೀಡಲು ಅನಿಲ್ ಹೆಗ್ಡೆ 3 ಕೋಟಿ ರೂ. ಹಾಗೂ 2 ಕೋಟಿ 15 ಲಕ್ಷದ 73 ಸಾವಿರದ 978 ರೂಪಾಯಿ ಮೊತ್ತದ ಚೆಕ್‌ಗಳನ್ನು ನೀಡಿದ್ದರು. ಈ ಚೆಕ್‌ಗಳನ್ನು ಬ್ಯಾಂಕಿಗೆ ಹಾಕಿದಾಗ ಬೌನ್ಸ್ ಆಗಿದ್ದವು. ಈ ಹಿನ್ನೆಲೆ, ಡ್ಯಾನಿ ಅವರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.