ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ ಮಂಗಳೂರಲ್ಲಿ ನಡೆದ ಹಿಂಸಾಚಾರ ಪ್ರಕರಣ ಸಂಬಂಧ ಪಿಎಫ್ಐನ 21 ಜನರಿಗೆ ಹೈಕೋರ್ಟ್ ಜಾಮೀನು ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿದೆ.
ಆರೋಪಿಗಳಿಗೆ ಹೈಕೋರ್ಟ್ ಆದೇಶ ಮಂಜೂರು ಮಾಡಿದ್ದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಮೆಟ್ಟಿಲೇರಿತ್ತು. ಅಂತೆಯೇ ಶುಕ್ರವಾರ ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಮತ್ತು ನ್ಯಾ.ಬಿ.ಆರ್.ಗವಿ ಹಾಗೂ ಸೂರ್ಯ ಕಾಂತ್ ಅವರಿದ್ದ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿ, ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದೆ. ಜೊತೆಗೆ ಜಾಮೀನು ಪಡೆದ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಮಂಗಳೂರಲ್ಲಿ ಕಳೆದ ಡಿ.19ರಂದು ಸಿಎಎ ವಿರೋಧಿ ಪ್ರತಿಭಟನೆ ಸಂದರ್ಭದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ಪೊಲೀಸರನ್ನು ಕೊಲ್ಲಲು ಸಂಚು ಹಾಗೂ ಗಲಭೆ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕೆಲವರನ್ನು ಬಂಧಿಸಿದ್ದರು. ಕೆಲ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಅರ್ಜಿ ಸಲ್ಲಿಸಿತ್ತು.
ಪೊಲೀಸರ ಆರೋಪವೇನು?
ಆರೋಪಿಗಳು 2019ರ ಡಿ.19ರಂದು ಸಿಎಎ ವಿರೋಧಿಸಿ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಎದುರಿನ ಜಂಕ್ಷನ್ ಬಳಿ ಅಕ್ರಮ ಕೂಟ ಸೇರಿದ್ದರು. ಠಾಣೆಗೆ ಬೆಂಕಿ ಹಚ್ಚಿ ಪೊಲೀಸರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಜಲ್ಲಿ ಕಲ್ಲು, ಸೋಡಾ ಬಾಟಲ್ ಹಾಗೂ ಗ್ಲಾಸ್‌ಗಳನ್ನು ಎಸೆದು ಠಾಣೆಯ ಹೆಂಚುಗಳನ್ನು ಜಖಂಗೊಳಿಸಿದ್ದರು. ವಾಹನಗಳನ್ನು ಪುಡಿ ಮಾಡಿದ್ದಲ್ಲದೆ, ಬೆಂಕಿ ಹಚ್ಚಿದ ಟಯರ್‌ಗಳನ್ನು ಠಾಣೆಯೊಳಗೆ ಹಾಕಲು ಪ್ರಯತ್ನಿಸಿದ್ದರು ಎಂದು ಪೊಲೀಸರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.