ಮಂಗಳೂರು:ಸುಲಲಿತ ಜೀವನ ಸೂಚ್ಯಂಕದಲ್ಲಿ ಮಂಗಳೂರು ಭಾರತದಲ್ಲಿಯೇ 20ನೇ ಸ್ಥಾನ ಹಾಗೂ ನಗರ ಸಭೆಯ ಕಾರ್ಯಕ್ಷಮತೆಯ ಸೂಚ್ಯಂಕದಲ್ಲಿ 42ನೇ ಸ್ಥಾನ ಪಡೆದಿದೆ ಎಂದು ಕೇಂದ್ರ ಸರಕಾರದ ವಸತಿ ಹಾಗೂ ನಗರ ವ್ಯವಹಾರಗಳ ಸಚಿವ ಹರದೀಪ್ ಸಿಂಗ್ ಪುರಿ ಘೋಷಣೆ ಮಾಡಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್ನಲ್ಲಿ ಈ ಘೋಷಣೆ ಮಾಡಿದ್ದಾರೆ. ಕಳೆದ ತಿಂಗಳು ಇದಕ್ಕಾಗಿ ಸರ್ವೇ ಕಾರ್ಯ ನಡೆಸಿ, ಸಾರ್ವಜನಿಕರ ಭಾಗವಹಿಸುವಿಕೆಯನ್ನು ಗುರುತಿಸಿ ಈ ಸೂಚ್ಯಂಕವನ್ನು ನೀಡಲಾಗಿದೆ.
ಸುಲಲಿತ ಜೀವನ ಸೂಚ್ಯಂಕದಲ್ಲಿ ಮಂಗಳೂರಿಗೆ ಭಾರತದಲ್ಲಿಯೇ 20ನೇ ಸ್ಥಾನ ಈ ಬಗ್ಗೆ ಮಂಗಳೂರು ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ, 2020 ರ ಸಾಲಿನ ಸೂಚ್ಯಂಕವನ್ನು ಕೇಂದ್ರ ಸಚಿವರು ಘೋಷಣೆ ಮಾಡಿದ್ದು, ಮುಂದಿನ ದಿನಗಳಲ್ಲಿ ನಮ್ಮ ನಗರವು ಹೆಚ್ಚಿನ ಸ್ಥಾನಗಳನ್ನು ಪಡೆಯುವಲ್ಲಿ ಎಲ್ಲಾ ನಾಗರಿಕರ ಸಹಕಾರ ಅತ್ಯಗತ್ಯ ಎಂದು ಹೇಳಿದರು.
ಮಂಗಳೂರು ನಗರ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿಯಡಿ ಈಗಾಗಲೇ 30-34 ಯೋಜನೆಗಳು ನಡೆಯುತ್ತಿದ್ದು, ಇನ್ನೂ ಕೆಲವು ಯೋಜನೆಗಳು ಟೆಂಡರ್ ಹಂತಗಳಲ್ಲಿವೆ. ಕೆಲವೊಂದು ಯೋಜನೆಗಳು ಡಿಪಿಆರ್ ಹಂತದಲ್ಲಿದೆ. ಪ್ರವಾಸೋದ್ಯಮ ಹಾಗೂ ಆರ್ಥಿಕ ಬೆಳವಣಿಗೆ ಹೆಚ್ಚು ಮಾಡುವ ನಿಟ್ಟಿನಲ್ಲಿ ಬಂದರು ಹಾಗೂ ಮೀನುಗಾರಿಕಾ ಇಲಾಖೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ಇಲಾಖಾ ಅಧಿಕಾರಿಗಳನ್ನು ಸೇರಿಸಿ ಹಂತ ಹಂತಗಳಲ್ಲಿ ಕ್ಲ್ಯಾಪ್ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಮೇಯರ್ ಹೇಳಿದರು.