ಕರ್ನಾಟಕ

karnataka

ETV Bharat / city

ಸುಳ್ಯ: ಬಣ್ಣದ ಮಾತುಗಳನ್ನಾಡಿ ಆಟೋ ಚಾಲಕನಿಗೆ ₹5 ಸಾವಿರ ಪಂಗನಾಮ!

ಸುಳ್ಯ ರಿಕ್ಷಾ ಚಾಲಕ ಗುಡ್ಡಪ್ಪ ರೈ ಎಂಬುವವರ ಆಟೋ ಹತ್ತಿದ ವ್ಯಕ್ತಿಯೋರ್ವ, ಬಣ್ಣದ ಮಾತುಗಳನ್ನಾಡಿ, ಆಟೋ ಚಾಲಕರಿಗೆ 50,000 ರೂ. ಸಹಾಯಧನ ತೆಗೆಸಿಕೊಡುವುದಾಗಿ ನಂಬಿಸಿ ಗುಡ್ಡಪ್ಪ ರೈ ಅವರಿಂದ 5,000 ರೂ. ಹಣ ಪಡೆದು ಪರಾರಿಯಾಗಿದ್ದಾನೆ.

man cheated to auto driver in sulya
ಸುಳ್ಳದಲ್ಲಿ ಆಟೋ ಚಾಲಕನಿಗೆ ವಂಚಿಸಿದ ವ್ಯಕ್ತಿ

By

Published : Jan 23, 2022, 5:39 PM IST

Updated : Jan 23, 2022, 6:44 PM IST

ಸುಳ್ಯ (ದಕ್ಷಿಣ ಕನ್ನಡ):ಸಮಾಜ ಕಲ್ಯಾಣ ಇಲಾಖೆಯಿಂದ ಆಟೋ ಚಾಲಕರಿಗೆ 50,000 ರೂ. ಸಹಾಯಧನ ತೆಗೆಸಿಕೊಡುವುದಾಗಿ ನಂಬಿಸಿದ ಅಪರಿಚಿತ ವ್ಯಕ್ತಿಯೊಬ್ಬ ರಿಕ್ಷಾ ಚಾಲಕರೊಬ್ಬರಿಂದ 5,000 ರೂ. ಹಣ ಪಡೆದು ಪರಾರಿಯಾದ ಘಟನೆ ಸುಳ್ಯದಲ್ಲಿ ಬೆಳಕಿಗೆ ಬಂದಿದೆ.

ಏನಿದು ಘಟನೆ?: ರಿಕ್ಷಾ ಚಾಲಕ ಗುಡ್ಡಪ್ಪ ರೈ ಎಂಬವವರು ಸುಳ್ಯ ಬಸ್ ನಿಲ್ದಾಣದ ಬಳಿ ಬಾಡಿಗೆಗಾಗಿ ಕಾಯುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬನು ಬಂದು ಆಟೋದಲ್ಲಿ ಕುಳಿತು, ಬಾಡಿಗೆ ಹೋಗೋಣ ಎನ್ನುತ್ತಾನೆ. ಆಟೋ ಶ್ರೀರಾಂಪೇಟೆ ದಾಟಿ ಸುಳ್ಯದ ಹಳೆಗೇಟು ಪೈಚಾರುವರೆಗೂ ಸಾಗಿತು.

ಈ ವೇಳೆ ಹಿಂಬದಿಯಲ್ಲಿ ಕುಳಿತ ಅಪರಿಚಿತ ವ್ಯಕ್ತಿ ಫೋನ್‌ನಲ್ಲಿ ಗಟ್ಟಿಯಾಗಿ ಮಾತನಾಡುತ್ತ ಈ ಯೋಜನೆ 50 ಸಾವಿರ ರೂಪಾಯಿ ಸಹಾಯಧನ ಕೊಡುವಂತದ್ದು, ರಿಕ್ಷಾ ಚಾಲಕರಿಗೆ ಮತ್ತು ಇತರೆ ಕುಶಲ ಕರ್ಮಿಗಳಿಗೆ ಮಾತ್ರ ಈ ಯೋಜನೆ ಇರೋದು. ಇದಕ್ಕೆ ಇಂದೇ ಕೊನೆಯ ದಿನ, ಬೇಕಾದರೆ ಬೇಗ ಅರ್ಜಿ ಕೊಡು ಎಂದು ಆತ ಫೋನ್​​ನಲ್ಲಿ ಹೇಳುತ್ತಿದ್ದುದು ರಿಕ್ಷಾ ಚಾಲಕನಿಗೆ ಕೇಳುತ್ತಿತ್ತು.

ವಂಚಕನ ಬಲೆಗೆ ಆಟೋ ಡ್ರೈವರ್: ನಂತರ ಆತ ಸುಳ್ಯದ ಪೈಚಾರು ಎಂಬಲ್ಲಿ ಒಬ್ಬರೊಡನೆ ಮಾತನಾಡಲಿದೆಯೆಂದು ಹೇಳಿ ರಿಕ್ಷಾದಿಂದ ಇಳಿಯುವಾಗ ರಿಕ್ಷಾ ಚಾಲಕ ಗುಡ್ಡಪ್ಪ ರೈ ಅವರು ಆತನೊಡನೆ ಅದು ಯಾವುದು ಸರ್ ರಿಕ್ಷಾ ಚಾಲಕರಿಗೆ ಸಹಾಯಧನ ಎಂದು ಪ್ರಶ್ನಿಸಿದ್ದಾರೆ.

ಕೂಡಲೇ ಪ್ರತ್ಯುತ್ತರ ನೀಡಿದ ವಂಚಕ ಇದು ಸಮಾಜ ಕಲ್ಯಾಣ ಇಲಾಖೆಯಿಂದ ಬಡವರಿಗೆ ನೀಡುವ 50,000 ರೂಪಾಯಿಯ ಸಹಾಯಧನ ಯೋಜನೆ. ಅದಕ್ಕೆ ಕೂಡಲೇ 5 ಸಾವಿರ ರೂಪಾಯಿ ಕಟ್ಟಿ ಅರ್ಜಿಯೊಂದನ್ನು ಕೊಡಬೇಕು. ಇಂದೇ ಇದರ ಕೊನೆಯ ದಿನ. ನಮ್ಮ ದ.ಕ ಜಿಲ್ಲೆಯ ಅಧಿಕಾರಿಯೊಬ್ಬರು ಈ ಎಲ್ಲಾ ಅರ್ಜಿಗಳನ್ನು ಹಿಡಿದುಕೊಂಡು ಇಂದೇ ಬೆಂಗಳೂರಿಗೆ ಹೋಗುತ್ತಾರೆ. ನಿಮಗೆ ಬೇಕಿದ್ದರೆ ಒಂದು ಅವಕಾಶ ಮಾತ್ರ ಇದೆ. ನಾನೇ ಮಾಡಿಕೊಡುತ್ತೇನೆ ಎನ್ನುತ್ತಾನೆ.

ಮೋಸ ಹೋದ ಆಟೋ ಚಾಲಕ:ಈ ಅಸಾಮಿಯ ಮಾತನ್ನು ನಂಬಿದ ರಿಕ್ಷಾ ಚಾಲಕ 50,000 ರೂ. ಸಹಾಯಧನ ಸಿಗುವುದಿದ್ದರೆ 5 ಸಾವಿರ ರೂ. ಕೊಟ್ಟರೂ ಪರವಾಗಿಲ್ಲ ಎಂದು ಭಾವಿಸಿ ಪೈಚಾರಿನಿಂದ ಆತನೊಂದಿಗೆ ಹಿಂತಿರುಗಿ ಸುಳ್ಯಕ್ಕೆ ಬಂದು ಬ್ಯಾಂಕಿನಲ್ಲಿದ್ದ ತನ್ನ ಉಳಿತಾಯ ಖಾತೆಯಿಂದ ಹಣ ತೆಗೆದು, ಆತ ಹೇಳಿದಂತೆ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯೊಂದಿಗೆ 5,000 ರೂ.ಗಳನ್ನು ಆ ವ್ಯಕ್ತಿಗೆ ಕೊಡುತ್ತಾರೆ.

ನಂತರ ಇದು ಇಂದೇ ಆಗಬೇಕಾಗಿದ್ದರಿಂದ ತುರ್ತಾಗಿ ಪುತ್ತೂರಿನ ಕಚೇರಿಗೆ ಹೋಗೋಣ ಎಂದು ಹೇಳಿ ರಿಕ್ಷಾದಲ್ಲೇ ಚಾಲಕನನ್ನು ಪುತ್ತೂರಿಗೆ ಕರೆದೊಯ್ಯುತ್ತಾನೆ. ಹೋಗುವ ದಾರಿ ಮಧ್ಯೆ ತನ್ನ ಪತ್ನಿ ಸಂಪ್ಯ ಪೊಲೀಸ್ ಠಾಣೆಯಲ್ಲಿ ಕಾನ್ಸ್​ಟೇಬಲ್ ಆಗಿ ದುಡಿಯುತ್ತಿದ್ದಾರೆ ಎಂದು ಹೇಳಿಕೊಳ್ಳುತ್ತಾನೆ.

ಇದನ್ನೂ ಓದಿ:ಬುದ್ಧಿವಾದ ಹೇಳಿದ ವ್ಯಕ್ತಿಯ ಉಸಿರೇ ನಿಲ್ಲಿಸಿದ ಅಸ್ಸೋಂ ಗ್ಯಾಂಗ್.. ಬೆಂಗಳೂರು ಪೊಲೀಸರೇನು ಸುಮ್ಮನಿರಲಿಲ್ಲ..

ಪುತ್ತೂರಿಗೆ ಹೋಗಿ ಕಚೇರಿಯೊಂದರ ಬಳಿ ಆಟೋ ನಿಲ್ಲಿಸಲು ಹೇಳಿದ ಈತ ಅಧಿಕಾರಿ ಒಳಗೆ ಇದ್ದಾರ ಅಂತ ನೋಡಿಕೊಂಡು ಬರುತ್ತೇನೆ ಎಂದು ಒಳಗೆ ಹೋಗಿದ್ದು, ಅರ್ಧ ಗಂಟೆ ಕಳೆದರೂ ಈತ ಹಿಂತಿರುಗಿ ಬಂದಿಲ್ಲ. ರಿಕ್ಷಾ ಚಾಲಕ ಒಳಗೆ ಹೋಗಿ ವಿಚಾರಿಸಿದಾಗ ಅಂತಹ ವ್ಯಕ್ತಿ ಇಲ್ಲಿ ಯಾರೂ ಇಲ್ಲ ಎಂದು ಅಲ್ಲಿದ್ದವರು ಹೇಳುತ್ತಾರೆ. ತಾನು ಮೋಸ ಹೋದದ್ದು ಅರಿವಾಗಿ ನೇರವಾಗಿ ಸಂಪ್ಯ ಪೊಲೀಸ್ ಠಾಣೆಗೆ ಹೋಗಿ ವಿಚಾರಿಸಿದರೆ ಅಲ್ಲಿ ಈ ವ್ಯಕ್ತಿಯ ಪತ್ನಿ ಯಾರೂ ಇಲ್ಲ ಎಂಬುದು ತಿಳಿದುಬರುತ್ತದೆ.

ದೂರು ದಾಖಲು:ಸಂಪ್ಯದ ಪೊಲೀಸರ ಸಲಹೆಯಂತೆ ಪುತ್ತೂರು ನಗರ ಠಾಣೆಗೆ ಬಂದು ಅಲ್ಲಿನ ಪೊಲೀಸರು ಹೇಳಿದಂತೆ ಸುಳ್ಯ ಪೊಲೀಸ್ ಠಾಣೆಗೆ ಬಂದು ದೂರು ನೀಡುತ್ತಾರೆ. ಸುಳ್ಯ ಪೊಲೀಸರು ಸಿ.ಸಿ. ಕ್ಯಾಮರಾಗಳನ್ನು ಪರಿಶೀಲನೆ ನಡೆಸಿದ್ದು, ಆತನ ಗುರುತು ಹಚ್ಚಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ. ಈತ ಮೈಸೂರು ಬಸ್​ನಲ್ಲಿ ಬಂದು ಸುಳ್ಯ ಬಸ್ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ನಡೆದುಕೊಂಡು ಬಂದು ರಿಕ್ಷಾಗೆ ಹತ್ತಿರುವುದು ಕಾಣುತ್ತದೆ. ಈತನು ಆಫೀಸರ್ ರೀತಿ ಡ್ರೆಸ್ ಮಾಡಿಕೊಂಡಿದ್ದು, ಮುಖಕ್ಕೆ ಮಾಸ್ಕ್ ಹಾಕಿಕೊಂಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಜಾಹೀರಾತು- ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 23, 2022, 6:44 PM IST

ABOUT THE AUTHOR

...view details