ಬೆಳ್ತಂಗಡಿ: ಅಜ್ಞಾನದ ಅಂಧಕಾರ ತೊಲಗಿಸಿ ಸುಜ್ಞಾನದ ಸುಗಂಧದೊಂದಿಗೆ ಎಲ್ಲರನ್ನು ಕತ್ತಲೆಯಿಂದ ಬೆಳಕಿನ ಕಡೆಗೆ ಸಾಗುವಂತೆ ಮಾಡುವುದೇ ಗುರುತತ್ವ ಎಂದು ಕನ್ಯಾಡಿ ಶ್ರೀ ರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು.
ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವಂತೆ ಮಾಡುವುದೇ ಗುರುತತ್ವ..
ಆಧ್ಯಾತ್ಮದ ಅಂತರಾಳದ ಮೌಲ್ಯವನ್ನು ಉಳಿಸುವವ ಗುರು, ಅಜ್ಞಾನದ ಅಂಧಕಾರವನ್ನು ಹೋಗಲಾಡಿಸಿ ಭಗವಂತನ ಆತ್ಮಸಾಕ್ಷಾತ್ಕಾರಕ್ಕಾಗಿ ಚಿತ್ತೈಸುವ ಶಕ್ತಿ ಗುರುವಿನಲ್ಲಿರುವುದರಿಂದ ಗುರುವಿನ ಆರಾಧನೆ ಶ್ರೇಷ್ಠವಾದುದು..
ಭಾನುವಾರ ಧರ್ಮಸ್ಥಳ ಗ್ರಾಮದ ಕನ್ಯಾಡಿ ಶ್ರೀ ರಾಮಕ್ಷೇತ್ರದಲ್ಲಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಗುರುಪೂರ್ಣಿಮೆ ನಿಮಿತ್ತ ಆಯೋಜಿಸಿದ ಗುರುಪೂಜೆ, ಗುರುವಂದನೆಯನ್ನು ಸ್ವೀಕರಿಸಿ ಮಾತನಾಡಿದ ಅವರು, ಆಧ್ಯಾತ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಶ್ರೇಷ್ಠವಾದ ಮಾನವ ಜನ್ಮದಲ್ಲಿ ಪರಿಶುದ್ಧ ಮನಸ್ಸಿನಿಂದ ಧರ್ಮದ ಅನುಷ್ಠಾನ ಮಾಡಿದಾಗ ಶಾಂತಿ, ನೆಮ್ಮದಿ ಸಿಗುತ್ತದೆ. ಆಧ್ಯಾತ್ಮದ ಅಂತರಾಳದ ಮೌಲ್ಯವನ್ನು ಉಳಿಸುವವ ಗುರು, ಅಜ್ಞಾನದ ಅಂಧಕಾರವನ್ನು ಹೋಗಲಾಡಿಸಿ ಭಗವಂತನ ಆತ್ಮಸಾಕ್ಷಾತ್ಕಾರಕ್ಕಾಗಿ ಚಿತ್ತೈಸುವ ಶಕ್ತಿ ಗುರುವಿನಲ್ಲಿರುವುದರಿಂದ ಗುರುವಿನ ಆರಾಧನೆ ಶ್ರೇಷ್ಠವಾದುದು ಎಂದರು.
ಸ್ಥಳೀಯ ಕಲ್ಮಂಜ ಓಂಕಾರೇಶ್ವರ ಭಜನಾ ಮಂಡಳಿ, ದೊಂಡೋಲೆ ಶ್ರೀರಾಮ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮ ಮೊದಲು ಸ್ವಾಮೀಜಿಯವರ ಪಾದಪೂಜೆ, ಬೆಳ್ಳಿ ಕಿರೀಟ ಧಾರಣೆ ನೆರವೇರಿತು. ವೇದಮೂರ್ತಿ ಲಕ್ಷ್ಮೀಪತಿ ಆಚಾರ್ಯ ಪೌರೋಹಿತ್ಯದ ವಿಧಾನಗಳನ್ನು ನೆರವೇರಿಸಿದರು. ವಿದ್ಯಾರ್ಥಿಗಳು ಲಿಂಗಾಷ್ಠಕ ಪಠಿಸಿದರು. ಬಳಿಕ ಗುರುಪೂಜೆ ಮತ್ತು ಗುರುವಂದನೆ ನಡೆಯಿತು.
ಜುಲೈ 10ರಿಂದ ಕನ್ಯಾಡಿ ಸ್ವಾಮೀಜಿ ಚಾತುರ್ಮಾಸ್ಯ:ಕನ್ಯಾಡಿ ಶ್ರೀ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧಿಪತಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಜುಲೈ 10 ರಿಂದ ತಮ್ಮ ಮೂಲ ಮಠ ಶ್ರೀರಾಮ ಕ್ಷೇತ್ರದ ಶ್ರೀ ಗುರುದೇವ ಮಠದಲ್ಲಿ ಚಾತುರ್ಮಾಸ್ಯವನ್ನು ಕೈಗೊಳ್ಳಲಿದ್ದಾರೆ ಎಂದು ಮಠದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.