ಮಂಗಳೂರು: ಕಾರ್ಕಳದ ಮಾಜಿ ಶಾಸಕ ಗೋಪಾಲ್ ಭಂಡಾರಿ ಅವರು ಹೃದಯಾಘಾತದಿಂದ ನಿನ್ನೆ ಮೃತಪಟ್ಟಿದ್ದಾರೆ.
ಹೃದಯಾಘಾತದಿಂದ ಬಸ್ನಲ್ಲೇ ಕಾರ್ಕಳದ ಮಾಜಿ ಶಾಸಕ ಗೋಪಾಲ ಭಂಡಾರಿ ನಿಧನ - ವೈದ್ಯರು
ಕಾರ್ಕಳದ ಮಾಜಿ ಶಾಸಕ ಗೋಪಾಲ್ ಭಂಡಾರಿ ಅವರು ನಿನ್ನೆ ಮಧ್ಯಾಹ್ನ ಬೆಂಗಳೂರಿನಿಂದ ಮಂಗಳೂರಿಗೆ ಹೊರಟಿದ್ದ ಬಸ್ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಬೆಂಗಳೂರಿಗೆ ಕಾರ್ಯನಿಮಿತ್ತ ತೆರಳಿದ್ದ ಅವರು ಮರಳಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ವೋಲ್ವೋ ಬಸ್ನಲ್ಲಿ ಮಂಗಳೂರಿಗೆ ಹೊರಟಿದ್ದರು. ಮಂಗಳೂರು ಬಸ್ ನಿಲ್ದಾಣ ತಲುಪಿದ ನಂತರ ಗೋಪಾಲ್ ಭಂಡಾರಿ ಅವರು ಕೆಳಗಿಳಿಯದ್ದನ್ನು ಕಂಡ ಬಸ್ ನಿರ್ವಾಹಕರು ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಅಲ್ಲಿಂದ ವೆನ್ಲಾಕ್ ಆಸ್ಪತ್ರೆಗೆ ಒಯ್ದಿದ್ದಾರೆ. ಆಗ ಗೋಪಾಲ್ ಭಂಡಾರಿ ಅವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಆಸ್ಪತ್ರೆಯ ವೈದ್ಯರು ಖಚಿತಪಡಿಸಿದ್ದಾರೆ. ಎರಡು ಬಾರಿ ಕಾಂಗ್ರೆಸ್ನಿಂದ ಗೆದ್ದು ಕಾರ್ಕಳದ ಶಾಸಕರಾಗಿದ್ದ ಗೋಪಾಲ ಭಂಡಾರಿ ಅವರು ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಸುನೀಲ್ ಕುಮಾರ್ ಎದುರು ಚುನಾವಣೆ ಎದುರಿಸಿ ಪರಾಭವಗೊಂಡಿದ್ದರು.
ಇನ್ನು, ಮಾಜಿ ಸಚಿವ ಡಾ.ಎಂ.ವೀರಪ್ಪ ಮೊಯ್ಲಿ, ಮಾಜಿ ಶಾಸಕ ಜೆ.ಆರ್.ಲೋಬೊ ಹಾಗೂ ಮಾಜಿ ಮನಪಾ ಮೇಯರ್ ಭಾಸ್ಕರ ಕೆ. ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿ, ಗೋಪಾಲ ಭಂಡಾರಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.