ಮಂಗಳೂರು: ಮಕ್ಕಳ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಆರೋಪದ ಮೇಲೆ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಮಂಗಳೂರಿಗೆ ಸಂಬಂಧಿಸಿದ ಈ ದೂರನ್ನು ಬೆಂಗಳೂರು ಸೈಬರ್ ಕ್ರೈಂ ವಿಭಾಗದ ಸಿಐಡಿ ಸ್ವೀಕರಿಸಿ, ದೂರಿನ ಪ್ರಾಥಮಿಕ ವಿಚಾರಣೆ ಕೈಗೊಂಡು ಮುಂದಿನ ತನಿಖೆಯ ಬಗ್ಗೆ ಮಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಕಳುಹಿಸಿಕೊಟ್ಟಿದೆ.
2020 ಜೂನ್ 28ರಂದು ಆ್ಯಸ್ಟನ್ ಎಂಬಾತ ಮಗುವೊಂದರ ಅಶ್ಲೀಲ ವಿಡಿಯೋವನ್ನು ಡೌನ್‌ಲೋಡ್ ಮಾಡಿಕೊಂಡು ಅಪ್ಲೋಡ್ ಮಾಡಿರುವ ಬಗ್ಗೆ 2021 ಜೂನ್ 22ರಂದು ಮಾಹಿತಿ ಲಭ್ಯವಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಗುವಿನ ಅಶ್ಲೀಲ ವಿಡಿಯೋ, ಆರೋಪಿಯ ಮೊಬೈಲ್ ನಂಬರ್, ಇಮೇಲ್ ಐಡಿ ಇತರೆ ಒಳಗೊಂಡಿರುವುದು ಕಂಡುಬಂದಿತ್ತು. ಸದರಿ ದೂರಿನ ಬಗ್ಗೆ ಪ್ರಾಥಮಿಕ ವಿಚಾರಣೆ ಮಾಡಿ, ಸಿಡಿಯಲ್ಲಿರುವ ಮಾಹಿತಿಯನ್ನು ದೃಢಪಡಿಸಿಕೊಂಡು ಆರೋಪಿಯ ವಿರುದ್ಧ ಕಲಂ 67(ಬಿ) ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.