ಮಂಗಳೂರು:ಬಿಜೆಪಿ ಯುವ ಮೋರ್ಚಾ ಮುಖಂಡ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ. ಸಿಯಾಬುದ್ದೀನ್ ಸುಳ್ಯ (33), ರಿಯಾಜ್ ಅಂಕತಡ್ಕ (27), ಬಶೀರ್ ಎಲಿಮಲೆ ಸುಬ್ರಹ್ಮಣ್ಯ (29) ಬಂಧಿತರು.
ಸಿಯಾಬುದ್ದೀನ್ ಕೊಕೊ ಸಪ್ಲೈ ಮಾಡುತ್ತಿದ್ದರೆ, ರಿಯಾಜ್ ಅಂಕತಡ್ಕ ಚಿಕನ್ ಸಪ್ಲೈ ಮತ್ತು ಬಶೀರ್ ಎಲಿಮಲೆ ಸುಬ್ರಹ್ಮಣ್ಯ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದರು. ಈ ಪ್ರಕರಣದಲ್ಲಿ ಸಂಘಟನೆಯ ಶಂಕಿತ ಲಿಂಕ್ ಬಗ್ಗೆ ಮಾಹಿತಿ ಇದೆ. ಪಿಎಫ್ಐ, ಎಸ್ಡಿಪಿಐ ಸದಸ್ಯರ ಜೊತೆ ಆರೋಪಿಗಳ ಸಂಪರ್ಕ ಇದ್ದು, ಈ ಬಗ್ಗೆ ಚಾರ್ಜ್ ಶೀಟ್ನಲ್ಲಿ ಉಲ್ಲೇಖಿಸಲಾಗುವುದು ಎಂದರು.
(ಓದಿ:ಪ್ರವೀಣ್ ನೆಟ್ಟಾರು ಸಾಕಿದ್ದ ಶ್ವಾನ ಅನಾರೋಗ್ಯದಿಂದ ಸಾವು)
ಕೇರಳ ಕರ್ನಾಟಕದ ತಲಪಾಡಿ ಗಡಿಯಲ್ಲಿ ಆರೋಪಿಗಳು ಬರುತ್ತಿರುವ ಮಾಹಿತಿ ಪಡೆದು ಸುಳ್ಯ ಇನ್ಸ್ಪೆಕ್ಟರ್ ನವೀನ್ ಚಂದ್ರ ಜೋಗಿ ಅವರು ದಾಳಿ ಮಾಡಿ ಆರೋಪಿಗಳನ್ನು ಇಂದು ಬೆಳಿಗ್ಗೆ ಬಂಧಿಸಿದ್ದಾರೆ. ಪ್ರಕರಣದಲ್ಲಿ ಈ ಮೊದಲು ಏಳು ಮಂದಿಯನ್ನು ಬಂಧಿಸಲಾಗಿತ್ತು. ಇದೀಗ ಬಂಧಿತರ ಸಂಖ್ಯೆ 10 ಕ್ಕೆ ಏರಿಕೆಯಾಗಿದೆ. ಈ ಹಿಂದೆ ಏಳು ಮಂದಿಯನ್ನು ಹತ್ಯೆಗೆ ಸಹಕರಿಸಿದ ಆರೋಪದಲ್ಲಿ ಬಂಧಿಸಲಾಗಿತ್ತು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಕೇರಳದಲ್ಲಿ ತಂಗಿದ್ದ ಆರೋಪಿಗಳು:ಇಂದು ಬಂಧಿತರಾದ ಮೂವರು ಆರೋಪಿಗಳು ಹತ್ಯೆ ಮಾಡಿದ ಬಳಿಕ ಕೇರಳದ ಕಾಸರಗೋಡು ವಿನ ಬೇಕಲ ರೋಡ್ನಲ್ಲಿರುವ ಮಾಲಿಕುದ್ದೀನ್ ಮಸೀದಿಯಲ್ಲಿ ತಂಗಿದ್ದರು. ಆ ಬಳಿಕ ಅವರು ಎಲ್ಲಿಗೆ ಹೋಗಿದ್ದರು ಎಂಬುದನ್ನು ತನಿಖೆ ಮಾಡಬೇಕಾಗಿದೆ. ಎಲ್ಲೆಲ್ಲಿ ಬಚ್ಚಿಟ್ಟುಕೊಂಡಿದ್ದರು, ಅವರಿಗೆ ಯಾರು ಆಶ್ರಯ ನೀಡಿದರು, ಯಾವ ಉದ್ದೇಶಕ್ಕಾಗಿ ಪ್ರವೀಣ್ ಹತ್ಯೆ ಮಾಡಿದ್ದಾರೆ ಎಂಬುದರ ಬಗ್ಗೆ ವಿಚಾರಣೆ ಮಾಡಬೇಕಾಗಿದೆ. ಪ್ರಕರಣದಲ್ಲಿ ಈ ಮೊದಲೇ ಬಂಧಿತನಾಗಿದ್ದ ಶಫೀಕ್ ಎಂಬಾತನ ತಂದೆ ಇಬ್ರಾಹಿಂ ಅವರು ಪ್ರವೀಣ್ ನೆಟ್ಟಾರು ಅವರ ಚಿಕನ್ ಶಾಪ್ನಲ್ಲಿ ಹಿಂದೆ ಕೆಲಸ ಮಾಡುತ್ತಿದ್ದರು ಎಂದು ಮಾಹಿತಿ ನೀಡಿದರು.
ಪ್ರಕರಣದ ಆರೋಪಿಗಳ ವಿಚಾರಣೆ ಮಾಡಿ ಎನ್ಐಎಗೆ ಹಸ್ತಾಂತರ:ಪ್ರಕರಣದ ತನಿಖೆಯನ್ನು ಸರ್ಕಾರ ಎನ್ಐಎಗೆ ನೀಡಿದೆ. ಈ ಪ್ರಕರಣದ ತನಿಖೆಯಲ್ಲಿ ಎನ್ಐಎ ಕೂಡ ನಮ್ಮ ಜೊತೆಗೆ ಕೈಜೋಡಿಸಿತ್ತು. ಆರೋಪಿಗಳಿಗೆ ಆಶ್ರಯ ನೀಡಿದವರು ಮತ್ತು ಹತ್ಯೆಗೆ ಉಪಯೋಗಿಸಿದ ಮಾರಕಾಸ್ತ್ರ, ವಾಹನಗಳನ್ನು ವಶಕ್ಕೆ ಪಡೆದು ಆ ಬಳಿಕ ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು.
ಈ ಪ್ರಕರಣದ ಬಗ್ಗೆ ಮುಖ್ಯಮಂತ್ರಿ, ಗೃಹಸಚಿವರು, ಡಿಜಿ ವಿಶೇಷ ಮುತುವರ್ಜಿ ವಹಿಸಿದ್ದರು. ಆರೋಪಿಗಳ ಪತ್ತೆಗೆ ಕರ್ತವ್ಯ ನಿರ್ವಹಿಸಿದ ಪೊಲೀಸ್ ಸಿಬ್ಬಂದಿಗೆ ಬಹುಮಾನವನ್ನು ನೀಡಲಾಗುವುದು. ಹಾಸನ ಎಸ್ಪಿ ಹರಿರಾಂ ಶಂಕರ್, ಕಾರವಾರ, ಉಡುಪಿ ಪೊಲೀಸರು ಸಹಕರಿಸಿದ್ದಾರೆ ಎಂದು ಅಲೋಕ್ ಕುಮಾರ್ ಹೇಳಿದರು. ಮಾಧ್ಯಮಗೋಷ್ಠಿಯಲ್ಲಿ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಷ್ ಸೋನಾವಾಣೆ, ದೇವಜ್ಯೋತಿ ರೇ, ಸಿಐಡಿ ಎಸ್ಪಿ ಅನುಚೇತ್ ಉಪಸ್ಥಿತರಿದ್ದರು.
(ಇದನ್ನೂ ಓದಿ: ಪ್ರವೀಣ್ ನೆಟ್ಟಾರ್ ಹತ್ಯೆ ಆರೋಪಿಗಳ ಆಸ್ತಿ ಮುಟ್ಟುಗೋಲು: ಎಡಿಜಿಪಿ ಅಲೋಕ್ ಕುಮಾರ್)