ಬೆಳ್ತಂಗಡಿ(ದಕ್ಷಿಣ ಕನ್ನಡ): ಗಲಾಟೆ ಬಿಡಿಸಲು ಹೋದ ವ್ಯಕ್ತಿ ಹಲ್ಲೆಗೊಳಗಾಗಿ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಬಳಿ ನಡೆದಿದೆ. ನಾಲ್ಕು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪದ ಮೇಲೆ ಓರ್ವನ ಮೇಲೆ ಹಲ್ಲೆ ನಡೆದಿದೆ. ಇದನ್ನು ತಡೆಯಲು ಬಂದ ಸಂಬಂಧಿಕನೊಬ್ಬನ ಮೇಲೂ ಹಲ್ಲೆಗೈಯ್ಯಲಾಗಿದ್ದು, ಆಸ್ಪತ್ರೆಗೆ ಸಾಗಿಸುವ ವೇಳೆ ಆತ ಸಾವನ್ನಪ್ಪಿರುವ ಘಟನೆ ಇಂದಬೆಟ್ಟು ಗ್ರಾಮದ ಪರಾರಿ ಶಾಂತಿನಗರ ಎಂಬಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಪರಾರಿ ಶಾಂತಿನಗರದಲ್ಲಿ ನಾರಾಯಣ ನಾಯ್ಕ್(47) ಎಂಬುವರ ಮೇಲೆ ಶಾಂತಿನಗರ ಆಟದ ಮೈದಾನದಲ್ಲಿ ಯುವಕರ ಗುಂಪೊಂದು ಅಡ್ಡಗಟ್ಟಿ ನೀನು ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದೀಯಾ ಎಂದು ಹೇಳಿ ಮಾರಣಾಂತಿಕ ಹಲ್ಲೆ ನಡೆಸುತ್ತಿದ್ದರು. ಇದನ್ನು ಕಂಡ ನಾರಾಯಣ ನಾಯ್ಕ್ ಹೆಂಡತಿಯ ಅಕ್ಕನ ಗಂಡ ಜಾರಪ್ಪ ನಾಯ್ಕ್ (55) ತಪ್ಪಿಸಲು ಬಂದಿದ್ದು, ಅವರ ಮೇಲೆಯೂ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು.