ಮಂಗಳೂರು:ಉದ್ಯಮಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಆರೋಪದಡಿ ಮುಲ್ಕಿ ಠಾಣಾ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರ ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳೂರಲ್ಲಿ ಉದ್ಯಮಿಯ ಹತ್ಯೆ ಪ್ರಕರಣ ಕಾರ್ನಾಡ್ ಬಪ್ಪನಾಡಿನ ಮುಹಮ್ಮದ್ ಹಾಸೀಮ್ (27), ನಿಸಾರ್ ಅಲಿಯಾಸ್ ರಿಯಾಝ್ (33), ಮುಹಮ್ಮದ್ ರಾಝೀಂ (24) ಮತ್ತು ಉಚ್ಚಿಲ ಬಡಾ ಗ್ರಾಮದ ಅಬೂಬಕ್ಕರ್ ಸಿದ್ದಿಕ್ (27) ಬಂಧಿತ ಆರೋಪಿಗಳು.
ಪ್ರಕರಣದ ವಿವರ:
ಹಹಳೆಯ ವೈಷಮ್ಯದಿಂದ ಈ ಕೊಲೆ ನಡೆದಿದ್ದು, ಘಟನೆಯಲ್ಲಿ ಮೂವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉದ್ಯಮಿ ಮುನೀರ್ ಕಾರ್ನಾಡ್ ಅವರು ಮಗ ಇಯಾಝ್, ಅಳಿಯ ಅಬ್ದುಲ್ಲ ತೀಫ್ ಹಾಗೂ ಇತರ ಇಬ್ಬರೊಂದಿಗೆ ಮುಲ್ಕಿ ಬಸ್ ನಿಲ್ದಾಣ ಪಕ್ಕದ ಬ್ಯಾಂಕ್ ಒಂದಕ್ಕೆ ಕಾರಿನಲ್ಲಿ ಬಂದಿದ್ದರು. ಈ ವೇಳೆ ವಾಹನಗಳಲ್ಲಿ ಬಂದ 6-7 ಜನರು ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರು. ದಾಳಿಯಲ್ಲಿ ತೀವ್ರವಾಗಿ ಹಲ್ಲೆಗೊಳಗಾಗದ ಮುನೀರ್ ಕಾರ್ನಾಡ್, ಇಯಾಝ್, ಅಬ್ದುಲ್ಲ ತೀಫ್ ಹಾಗೂ ಇಮ್ರಾನ್ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ, ತೀವ್ರವಾಗಿ ಗಾಯಗೊಂಡ ಉದ್ಯಮಿ ಅಬ್ದುಲ್ಲ ತೀಫ್ ದಾರಿ ಮಧ್ಯೆ ಮೃತಪಟ್ಟಿದ್ದರು.
ಘಟನೆಯ ಭೀಕರ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದವು. ಅಲ್ಲದೆ, ವ್ಯಕ್ತಿಯೊಬ್ಬರು ದುಷ್ಕರ್ಮಿಗಳ ದಾಳಿಯನ್ನ ಮೊಬೈಲ್ ಮೂಲಕ ಚಿತ್ರಿಸಿದ್ದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಆಧರಿಸಿ ನಾಲ್ವರನ್ನ ಮುಲ್ಕಿ ಠಾಣಾ ಪೊಲೀಸರು ಹಾಗೂ ಮಂಗಳೂರು ಉತ್ತರ ಉಪ ವಿಭಾಗದ ರೌಡಿ ನಿಗ್ರಹ ದಳ ಬಂಧಿಸಿದ್ದಾರೆ. ಉಳಿದವರ ಪತ್ತೆಗೆ ಬಲೆ ಬೀಸಿದ್ದಾರೆ.