ಕಲಬುರಗಿ : ಅವಧಿಗೆ ಮುನ್ನವೇ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಆಗುತ್ತೆ ಎಂದು ನನಗೇನು ಅನಿಸ್ತಿಲ್ಲ. ಜಿಲ್ಲಾ ಪಂಚಾಯತ್ ಚುನಾವಣೆ ಮಾಡದವರು ವಿಧಾನಸಭಾ ಚುನಾವಣೆ ಮಾಡುತ್ತಾರಾ ಎಂದು ಕಲಬುರಗಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬಿಜೆಪಿ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿರುವುದು.. ವಿಜಯಪುರ ಜಿಲ್ಲೆಗೆ ತೆರಳಲು ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಅವರು, ನನಗಿರೋ ಮಾಹಿತಿ ಪ್ರಕಾರ ಬಿಜೆಪಿ ಅವಧಿಗೂ ಮುನ್ನವೇ ಚುನಾವಣೆಗೆ ಹೋಗಲ್ಲ. ಹಾಗೊಂದು ವೇಳೆ ಚುನಾವಣೆಗೆ ಬಂದ್ರೆ ನಾವು ತಯಾರಿದ್ದೇವೆ ಅಂತಾ ಹೇಳಿದರು.
ಕುಮಾರಸ್ವಾಮಿ ಹೇಳಿಕೆ ವಿಚಾರ :ಸಿದ್ದರಾಮಯ್ಯರ ಹೆಸರನ್ನು ಭಾರತ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಬೇಕು ಅನ್ನೋ ಹೇಳಿಕೆ ಕುರಿತಾಗಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಕುಮಾರಸ್ವಾಮಿ ವ್ಯಂಗ್ಯವಾಗಿ ಹೇಳಿದ್ದಾರೆ. ಈಗಲಟನ್ ರೆಸಾರ್ಟ್‌ಗೆ ದಂಡ ಹಾಕಿದ್ದಕ್ಕೆ ಹೀಗೆ ಮಾತನಾಡುತ್ತಿದ್ದಾರೆ.
ಕೋರ್ಟ್ ಕೂಡ ನಮ್ಮ ತೀರ್ಮಾನ ಎತ್ತಿ ಹಿಡಿದಿದೆ. ಸ್ವ್ಯಾಯರ್‌ಫೀಟ್ ಲೆಕ್ಕದಲ್ಲಿ 982 ಕೋಟಿ ಆಗಿತ್ತು. ಕುಮಾರಸ್ವಾಮಿ ಈಗ ಏಕೆ ಬ್ಯಾಟಿಂಗ್ ಮಾಡ್ತಿದ್ದಾರೆ. ಕುಮಾರಸ್ವಾಮಿ ಅಲ್ಲಾ, ಯಾರು ಟಾರ್ಗೆಟ್ ಮಾಡಿದ್ರೂ ನಾನು ಹೆದರೋದಿಲ್ಲಾ. ನನ್ನ ಕಂಡ್ರೆ ಅವರಿಗೆ ಭಯ. ಹೀಗಾಗಿ, ನನ್ನ ವಿರುದ್ಧ ಮಾತನಾಡುತ್ತಾರೆ ಎಂದು ತಿರುಗೇಟು ನೀಡಿದರು.
ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯ :ಇದೇ ವೇಳೆ ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳು ಇವೆ ಎಂಬ ಹೇಳಿಕೆ ಕುರಿತಾಗಿ ಮಾತನಾಡಿದ ಅವರು, ಎಲ್ಲಾ ಪಕ್ಷಗಳಲ್ಲಿ ಆಂತರಿಕ ಭಿನ್ನಾಭಿಪ್ರಾಯ ಇದ್ದೇ ಇರುತ್ತವೆ. ಇದೇ ಈಶ್ವರಪ್ಪ ರಾಜ್ಯಪಾಲರಿಗೆ ಸಿಎಂ ವಿರುದ್ಧ ಪತ್ರ ಬರೆದಿದ್ದರು. ಯತ್ನಾಳ್ ಸರ್ಕಾರದ ವಿರುದ್ಧ ಮಾತನಾಡಿಲ್ವಾ, ಅದು ಭಿನ್ನಾಭಿಪ್ರಾಯ ಅಲ್ವಾ? ಎಂದು ಮರು ಪ್ರಶ್ನೆ ಮಾಡಿದರು. ಕಾಂಗ್ರೆಸ್ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲ್ಲಾ ಎಂಬ ಯಡಿಯೂರಪ್ಪ ಹೇಳಿಕೆಗೆ, ಯಡಿಯೂರಪ್ಪರನ್ನೇ ತಗೆದಿದ್ದಾರಲ್ವಾ, ಆಗ ಅವರೇ ಅತ್ತಿಲ್ವಾ? ಜೈಲಿಗೆ ಹಾಕ್ತೇನೆ ಅಂತಾ ಹೆದರಿಸಿದರಲ್ಲಾ. ಮೊದಲೇ ಯಡಿಯೂರಪ್ಪನವರಿಗೆ ಎರಡು ವರ್ಷದ ಅವಧಿಗೆ ಮಾತ್ರ ಸಿಎಂ ಮಾಡಿದ್ದರು ಎಂದು ಕಾಲೆಳೆದರು.
ಪಕ್ಷ ತೊರೆದ ಶಾಸಕರಿಗೆ ನೋ ಎಂಟ್ರಿ :ಕಾಂಗ್ರೆಸ್ ಬಿಟ್ಟು ಹೋಗಿರೋ ಶಾಸಕರು ಮತ್ತೆ ಬಂದ್ರೆ ಅವರನ್ನು ತಗೋಳೋದಿಲ್ಲಾ. ಮೋದಿ ಅವರು ಕರ್ನಾಟಕ ಟಾರ್ಗೆಟ್ ಮಾಡಿದ್ರು ಕೂಡ ಪಕ್ಷ ತೊರೆದ ಶಾಸಕರು ಸೋಲುತ್ತಾರೆೆ. ಸದ್ಯದ ಪರಿಸ್ಥಿತಿಯಲ್ಲಿ ಜನ ಸಾಧನೆ ಮೇಲೆ ಮತ ಹಾಕುವುದನ್ನು ಕಡಿಮೆ ಮಾಡಿದ್ದಾರೆ. ಹಿಂದುತ್ವದ ಆಧಾರದ ಮೇಲೆ ಮತ ಹಾಕುತ್ತಿದ್ದಾರೆ ಎಂದರು.