ಕಲಬುರಗಿ:ಮ್ಯಾನ್ ಹೋಲ್ ದುರಂತ ಹಿನ್ನೆಲೆ ಇಂದು ನಗರಕ್ಕೆ ಭೇಟಿ ನೀಡಿದ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ, ಘಟನಾ ಸ್ಥಳ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಚೆಕ್ ವಿತರಿಸಿ ಸಾಂತ್ವನ ಹೇಳಿದರು.
ಜ. 28ರಂದು ನಗರದ ಕೈಲಾಶ್ ನಗರದಲ್ಲಿ ಮ್ಯಾನ್ ಹೋಲ್ ಸ್ವಚ್ಛತೆಗೆ ಇಳಿದಿದ್ದ ಲಾಲ್ ಅಹ್ಮದ್ ಮತ್ತು ರಶೀದ್ ಅಹ್ಮದ್ ಎಂಬ ಗುತ್ತಿಗೆ ಕಾರ್ಮಿಕರು ಉಸಿರುಗಟ್ಟಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಮತ್ತೋರ್ವ ಕಾರ್ಮಿಕ ರಾಜ್ ಅಹ್ಮದ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಹಿನ್ನೆಲೆ ಆರ್ಜಿ ನಗರ ಪೊಲೀಸ್ ಠಾಣೆಯಲ್ಲಿ ಒಳಚರಂಡಿ ಮಂಡಳಿ ಅಧಿಕಾರಿಗಳು ಹಾಗೂ ಗುತ್ತಿಗೆದಾರ ಸೇರಿ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮ್ಯಾನ್ ಹೋಲ್ ದುರಂತ ಪ್ರಕರಣ ಹಿನ್ನೆಲೆ ಇಂದು ರಾಜ್ಯ ಸಫಾಯಿ ಕರ್ಮಚಾರಿ ಆರೋಗದ ಅಧ್ಯಕ್ಷ ಎಂ.ಶಿವಣ್ಣ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದುರಂತ ಸಂಭವಿಸಿದ ಬಗ್ಗೆ ಮಾಹಿತಿ ಪಡೆದ ಶಿವಣ್ಣ, ಇದೊಂದು ಅಮಾನವೀಯ ಘಟನೆ. ಇಂತಹ ಘೋರ ದುರಂತ ನಡೆಯಬಾರದಿತ್ತು. ಸುಪ್ರೀಂ ಕೋರ್ಟ್ ಹೇಳಿದ ನಂತರವೂ ಈ ರೀತಿಯಾಗಿ ಸ್ವಚ್ಛತೆಗಾಗಿ ಕಾರ್ಮಿಕರನ್ನು ಚರಂಡಿಗೆ ಇಳಿಸಿರೋದು ತಪ್ಪು.
ಓದಿ-ಫೆ. 1ರಿಂದ ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ 9-12ನೇ ತರಗತಿ ಆರಂಭ
ದುರಂತದಲ್ಲಿ ಅಧಿಕಾರಿಗಳ, ಗುತ್ತಿಗೆದಾರನ ನಿರ್ಲಕ್ಷ್ಯವಿದೆ. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗಿದೆ. ಹೆಚ್ಚುವರಿಯಾಗಿ ಮತ್ತೆ 5 ಲಕ್ಷ ಪರಿಹಾರ ನೀಡಲಾಗುವುದು ಎಂದು ಶಿವಣ್ಣ ಹೇಳಿದರು.