ಕಲಬುರಗಿ:ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಪಟ್ಟಕ್ಕಾಗಿ ನಡೆಯುತ್ತಿರುವ ಗುದ್ದಾಟಕ್ಕೆ ಹೊಸ ತಿರುವು ಸಿಕ್ಕಿದೆ. ಪಕ್ಷೇತರ ಸದಸ್ಯ ಶಂಭುಲಿಂಗ ಬಳಬಟ್ಟಿ ಅವರು ಬಿಜೆಪಿ ಸೇರ್ಪಡೆಯಾಗುವ ಮೂಲಕ ಕುತೂಹಲ ಹೆಚ್ಚಿಸಿದ್ದಾರೆ.
ಪಕ್ಷೇತರ ಅಭ್ಯರ್ಥಿ ಶಂಭುಲಿಂಗ ಬಳಬಟ್ಟಿ ಬಿಜೆಪಿ ಸೇರ್ಪಡೆ ಶಂಭುಲಿಂಗ ಬಳಬಟ್ಟಿ ಅವರು ವಾರ್ಡ್ ನಂ 38 ರ ಪಕ್ಷೇತರ ಅಭ್ಯರ್ಥಿಯಾಗಿ ಜಯ ಸಾಧಿಸಿದ್ದರು. ಇದೀಗ ಅಧಿಕೃತವಾಗಿ ಬೆಂಗಳೂರಿನಲ್ಲಿ ಕಲಬುರಗಿಯ ಬಿಜೆಪಿ ಶಾಸಕರ ನೇತೃತ್ವದಲ್ಲಿ ಕಮಲ ಮುಡಿದಿದ್ದಾರೆ. ಮಹಾನಗರ ಪಾಲಿಕೆ ಮೇಯರ್ ಗದ್ದುಗೆ ಏರಲು 32 ಸ್ಥಾನಗಳ ಅವಶ್ಯಕತೆ ಇದೆ. ಇದೀಗ ಜೆಡಿಎಸ್ ಬೆಂಬಲದ ಮೇಲೆ ಅವಲಂಬಿತವಾದ ಕಾಂಗ್ರೆಸ್ ಮತ್ತು ಬಿಜೆಪಿ ಏನಾದ್ರೂ ಮಾಡಿ ಕಲಬುರಗಿ ಪಾಲಿಕೆಯಲ್ಲಿ ಸರ್ಕಾರದ ರಚಿಸಲೇಬೇಕು ಎಂದು ಕಸರತ್ತು ನಡೆಸಿವೆ.
ಬಿಜೆಪಿ 23+1 ಪಕ್ಷೇತರ ಅಭ್ಯರ್ಥಿ 24, ಕಾಂಗ್ರೆಸ್ 27, ಜೆಡಿಎಸ್ 4 ಸ್ಥಾನಗಳನ್ನು ಹೊಂದಿವೆ. ಈಗಾಗಲೇ ಮೇಯರ್ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಕೂಡ ಸಿದ್ಧತೆ ನಡೆಸಿದೆ. ಆದರೆ, ಇನ್ನೂ ಮೇಯರ್ ಚುನಾವಣೆಗೆ ದಿನಾಂಕ ನಿಗದಿ ಆಗಿಲ್ಲ. ಮೇಯರ್ ಚುನಾವಣೆ ದಿನಾಂಕ ಘೋಷಣೆ ಬಳಿಕ ಯಾರಿಗೆ ಬೆಂಬಲ ನೀಡಬೇಕು ಎನ್ನುವುದರ ಬಗ್ಗೆ ಜೆಡಿಎಸ್ ನಿರ್ಧಾರ ಮಾಡಲಿದೆ.
ಸದ್ಯ ಪಕ್ಷೇತರ ಸದಸ್ಯ ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ. ಇದರಿಂದ ಬಿಜೆಪಿಗೆ ಮತ್ತಷ್ಟು ಬಲ ಬಂದಂತಾಗಿದೆ. ಜೆಡಿಎಸ್ ಬೆಂಬಲ ಸಿಕ್ಕರೆ ಸರ್ಕಾರ ರಚಿಸಲು ಬಿಜೆಪಿ ನಾಯಕರು ಕಸರತ್ತು ಆರಂಭಿಸಿದ್ದಾರೆ. ಇತ್ತ ಕಾಂಗ್ರೆಸ್ ನಾಯಕರು ಸಹ ಜೆಡಿಎಸ್ ಪಕ್ಷ ಕಾಂಗ್ರೆಸ್ ಗೆ ಬೆಂಬಲ ಸೂಚಿಸುತ್ತದೆ ಎಂಬ ಭರವಸೆಯಲ್ಲಿದ್ದಾರೆೆ. ಎಲ್ಲದಕ್ಕೂ ಸರ್ಕಾರ ಮೇಯರ್ ಚುನಾವಣೆ ಘೋಷಣೆ ಮಾಡಿದ ಬಳಿಕವೇ ಉತ್ತರ ಸಿಗಲಿದೆ.
ಇದನ್ನೂ ಓದಿ:ಮೀಸಲಾತಿಗೆ ಪಟ್ಟು: ಆಡಳಿತ ಪಕ್ಷದ ಯತ್ನಾಳ್, ಬೆಲ್ಲದರಿಂದಲೇ ಸದನದಲ್ಲಿ ಧರಣಿ