ಕಲಬುರಗಿ:ಯುದ್ಧಕಾಲ ಶಸ್ತ್ರಾಭ್ಯಾಸ ಎನ್ನುವ ಧೋರಣೆ ಸರಿಯಲ್ಲ. ಚುನಾವಣೆಗೆ ಮೊದಲೇ ನೀವು ತಯಾರಾಗಬೇಕು. ಆ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕರೆ ನೀಡಿದರು.
ಮಾಹಿತಿ ತಂತ್ರಜ್ಞಾನ ಹಾಗೂ ಸೋಷಿಯಲ್ ಮೀಡಿಯಾವನ್ನು ಸರಿಯಾಗಿ ಬಳಸಿಕೊಂಡು ಪಕ್ಷ ಜನರನ್ನು ಮುಟ್ಟುವಂತ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ. ಹಾಗಾಗಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಸೋಷಿಯಲ್ ಮೀಡಿಯಾವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ನಮ್ಮ ಪಕ್ಷದ ಶಾಸಕರು ತಾವು ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಜನರಿಗೆ ಮಾಹಿತಿ ತಲುಪಿಸಲು ಸೋಷಿಯಲ್ ಮೀಡಿಯಾವನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಲಬುರಗಿಯಲ್ಲಿ ನಡೆದ ವಿಭಾಗ ಮಟ್ಟದ ಸಂಕಲ್ಪ ಸಮಾವೇಶ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಕಚೇರಿ ದೇವಸ್ಥಾನವಿದ್ದಂತೆ. ಜಿಲ್ಲೆಯ ತಾಲೂಕು ಮಟ್ಟದ ಕಚೇರಿಗಳನ್ನು ಕಟ್ಟಡದಲ್ಲಿ ನಡೆಸಿ. ಸ್ವಂತ ಕಟ್ಟಡವಿಲ್ಲದಿದ್ದರೆ ಬಾಡಿಗೆ ಕಟ್ಟಡದಲ್ಲಿ ನಡೆಸಿ ಪಕ್ಷಕ್ಕೆ ಸಂಬಂಧಿಸಿದಂತಹ ಚರ್ಚೆಗಳನ್ನು ಅಲ್ಲಿಯೇ ನಡೆಸಿ ಎಂದು ಹೇಳಿದರು.
ಇದನ್ನೂ ಓದಿ:ಶಾಸಕ ಶರತ್ ಬಚ್ಚೇಗೌಡ ಮದುವೆ ಆಗುವುದಷ್ಟೇ ಬಾಕಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್
ಬ್ಲಾಕ್ ಮಟ್ಟದಲ್ಲಿ ಪದಾಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ ಆಕಾಂಕ್ಷಿಗಳ ಪಟ್ಟಿಯನ್ನು ಸಿದ್ಧಪಡಿಸಿ ನನಗೆ ಕಳಿಸಿ. ನಾನು ನೇಮಕ ಮಾಡಿ ಆದೇಶ ಹೊರಡಿಸುತ್ತೇನೆ. ನನ್ನ ಗಮನಕ್ಕೆ ಬರದೇ ಮಾಡಲಾದ ನೇಮಕಾತಿಗಳಿಗೆ ಮಾನ್ಯತೆ ಇಲ್ಲ. ನಾನು ಅಂತಹ ನೇಮಕಾತಿಗಳನ್ನು ರದ್ದುಪಡಿಸುತ್ತೇನೆ ಎಂದರು.
ಇಂದಿನ ಸಭೆಯಲ್ಲಿ ಭಾಗವಹಿಸಿರುವವರು ಒಳ್ಳೆಯ ಸಲಹೆ ನೀಡಿದ್ದೀರಿ. ಕೊಪ್ಪಳ ಅಧ್ಯಕ್ಷರು ಧರ್ಮದ ವಿಚಾರದಲ್ಲಿ ಸಲಹೆ ನೀಡಿದ್ದಾರೆ. ನಮಗೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲ ಧರ್ಮಗಳು ಸಮ. ಆದರೆ, ಬಿಜೆಪಿಯವರು ನಾವೆಲ್ಲ ಹಿಂದೂ, ಹಿಂದೂ ಮುಂದು ಎನ್ನುತ್ತಾರೆ. ನಮಗೆ ಎಲ್ಲ ಧರ್ಮಗಳಲ್ಲಿ ನಂಬಿಕೆಯಿದೆ. ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷವೇ ನಮಗೆ ಧರ್ಮ ಎಂದಿದ್ದಾರೆ. ಪಕ್ಷದಿಂದ ದೂರ ಹೋದವರನ್ನು ಮತ್ತೆ ಪಕ್ಷಕ್ಕೆ ವಾಪಸ್ ಕರೆ ತರುವ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳೀಯ ಮಟ್ಟದ ನಾಯಕರು ಈ ವಿಷಯದಲ್ಲಿ ನಿರ್ಧಾರ ಕೈಗೊಂಡು ನಮಗೆ ತಿಳಿಸಿ ಎಂದರು.
ಇದನ್ನೂ ಓದಿ:ನಾರಾಯಣಗೌಡ ಯಾರು ಗೊತ್ತಿಲ್ಲ ಎಂದಿದ್ದ ಸಚಿವ ಸುಧಾಕರ್ಗೆ ಕರವೇ ಕಾರ್ಯಕರ್ತರ ಮುತ್ತಿಗೆ
ನನಗೆ ಎಷ್ಟು ತೊಂದರೆ ಕೊಟ್ಟರೂ ಹೆದರುವವನಲ್ಲ. ನಿಮ್ಮ ಆಶೀರ್ವಾದ ಇದ್ದರೆ ಸಾಕು ಕೇಂದ್ರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡುತ್ತೇನೆ. ಗಣರಾಜ್ಯೋತ್ಸವದ ನಂತರ ಕೃಷಿ ಕಾಯ್ದೆಯ ವಿರುದ್ದ ಭಾರೀ ಹೋರಾಟ ನಡೆಯುತ್ತದೆ. ನಾನು ಮತ್ತು ನಮ್ಮ ಪಕ್ಷದ ಹಿರಿಯ ನಾಯಕರು ಈ ಮೂರು ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತೇವೆ ಎಂದರು.
ಶಾಸಕ ಪ್ರಿಯಾಂಕ್ ಖರ್ಗೆ ತಮ್ಮ ಉತ್ತಮ ಸಲಹೆಗಳ ಮೂಲಕ ಗಮನ ಸೆಳೆದಿದ್ದಾರೆ. ಅವರು ಮುಂದಿನ ಭರವಸೆಯ ನಾಯಕರಾಗಲಿದ್ದಾರೆ ಎಂದು ಡಿ.ಕೆ. ಶಿವಕುಮಾರ ಮೆಚ್ಚುಗೆ ವ್ಯಕ್ತಪಡಿಸಿ, ಮಾಜಿ ಸಚಿವ ಡಾ ಶರಣಪ್ರಕಾಶ್ ಪಾಟೀಲ್, ಅಜಯ್ ಸಿಂಗ್ ಅವರು ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ ಎಂದರು.