ಸೇಡಂ (ಕಲಬುರಗಿ):1972ರಲ್ಲಿ ಶುರುವಾದ ಸಿಸಿಐ ವಾರ್ಷಿಕ 2 ಲಕ್ಷ ಟನ್ ಸಿಮೆಂಟ್ ಉತ್ಪಾದನೆಯ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿತ್ತು. ಕೆಲ ಆಂತರಿಕ ವ್ಯವಹಾರಗಳ ಅಡಚಣೆ, ಖಾಸಗಿ ಸಿಮೆಂಟ್ ಕಾರ್ಖಾನೆಗಳೊಂದಿಗಿನ ಸ್ಪರ್ಧೆಗೆ ಸಡ್ಡು ಹೊಡೆಯಲಾಗದೆ 1998ರಲ್ಲಿ ಸ್ಥಗಿತಗೊಂಡಿತ್ತು. ಇದರಿಂದ 450ಕ್ಕೂ ಹೆಚ್ಚು ಕಾರ್ಮಿಕರು ಬೀದಿ ಪಾಲಾಗಿದ್ದರು.
ಇತ್ತೀಚೆಗೆ ಸಿಸಿಐ ಅದಾನಿ ಪಾಲಾಗಲಿದೆ ಎಂಬ ಮಾಹಿತಿ ದೊರೆತಾಗ ಈ ಭಾಗದ ಸಾವಿರಾರು ಕುಟುಂಬಗಳು ನೌಕರಿಯ ಕನಸು ಕಂಡಿದ್ದವು. ಈಗ ಎಲ್ಲವೂ ಹುಸಿಯಾದಂತಾಗಿದ್ದು, ಈ ಕುರಿತು ರಾಜ್ಯ ಸರ್ಕಾರ ಅಥವಾ ಸಿಸಿಐ ಪ್ರಾರಂಭಿಸುವ ಭರವಸೆ ನೀಡಿದ್ದ ಸಂಸದ ಡಾ. ಉಮೇಶ ಜಾಧವ್ ಉತ್ತರಿಸಬೇಕಾಗಿದೆ.
ತಾಲೂಕಿನ ಕುರಕುಂಟಾ ಗ್ರಾಮದಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಸಿಸಿಐ (ಸಿಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ) ಸಿಮೆಂಟ್ ಕಾರ್ಖಾನೆ ಉದ್ಯಮಿ ಅದಾನಿ ಪಾಲಾಗಲಿದೆ ಎಂಬ ಸುದ್ದಿ ಕೆಲ ದಿನಗಳ ಹಿಂದೆ ದೊಡ್ಡ ಮಟ್ಟದಲ್ಲೇ ಸದ್ದು ಮಾಡಿತ್ತು. ಗ್ರಾಮದ ನಿವಾಸಿ, ವಕೀಲ ಸಿದ್ಧಲಿಂಗರೆಡ್ಡಿ ಪಾಟೀಲ ಅವರು ಸಲ್ಲಿಸಿದ್ದ ಆರ್.ಟಿ.ಐ. ಅರ್ಜಿಯಿಂದ ಸಿಸಿಐ ಅದಾನಿಗೂ ಇಲ್ಲ, ಅಂಬಾನಿಗೂ ಇಲ್ಲ ಎಂಬ ಸತ್ಯ ಹೊರಬಿದ್ದಿದೆ.
ಕೇಂದ್ರ ಸರ್ಕಾರದ ಸಿಸಿಐ ಕಾರ್ಖಾನೆಯನ್ನು ಉದ್ಯಮಿ ಗೌತಮ ಅದಾನಿ ಮಾಲೀಕತ್ವದ ಅದಾನಿ ಸಿಮೆಂಟ್ ಇಂಡಸ್ಟ್ರೀಸ್ ಲಿಮಿಟೆಡ್ ಅಭಿವೃದ್ಧಿಪಡಿಸಲು ಮುಂದಾಗಿದೆ ಎನ್ನಲಾಗಿತ್ತು. ಕಾರ್ಖಾನೆ ಆರಂಭಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕೇಂದ್ರದ ಬೃಹತ್ ಕೈಗಾರಿಕೆ ಇಲಾಖೆ ಅನುಮೋದನೆ ನೀಡಿದೆ ಎಂಬ ಮಾತು ಕೇಳಿಬಂದಿತ್ತು.
ಆದರೀಗ ಸತ್ಯ ಬಟಾಬಯಲಾಗಿದ್ದು, ಯಾವುದೇ ರೀತಿಯ ಮಾಲೀಕತ್ವ ಯಾರೂ ವಹಿಸುತ್ತಿಲ್ಲ. ಯಾರೂ ಖರೀದಿಗೆ ಮುಂದಾಗಿಲ್ಲ. ಅಲ್ಲದೆ ಈ ಕುರಿತು ಯಾವ ಮಾಹಿತಿಯೂ ಸಹ ತಮಗಿಲ್ಲ ಎಂದು ಛತ್ತೀಸಗಢ ರಾಜ್ಯದಲ್ಲಿರುವ ಸಿಸಿಐ ಮುಖ್ಯ ಕಚೇರಿಯ ವ್ಯವಸ್ಥಾಪಕ ಹಾಗೂ ಕುರಕುಂಟಾ ಸಿಸಿಐ ಕಾರ್ಖಾನೆಯ ಕಾರ್ಯನಿರ್ವಾಹಕ ಉಸ್ತುವಾರಿ ಅಧಿಕಾರಿಯಾಗಿರುವ ಉಮಾಶಂಕರ ಕುಮಾರ ಅವರು ಸಿದ್ಧಲಿಂಗರೆಡ್ಡಿಯವರು ಸಲ್ಲಿಸಿದ್ದ ಆರ್.ಟಿ.ಐ.ಗೆ ಉತ್ತರಿಸಿದ್ದಾರೆ.
ವಕೀಲ ಸಿದ್ಧಲಿಂಗರೆಡ್ಡಿ ಪಾಟೀಲ ಅವರು ಸಲ್ಲಿಸಿದ್ದ ಆರ್.ಟಿ.ಐ. ನಲ್ಲಿ ಈ ರೀತಿ ಕೇಳಲಾಗಿದೆ.
೧. ಸೇಡಂ ತಾಲೂಕಿನ ಕುರಕುಂಟಾದಲ್ಲಿರುವ ಸ್ಥಗಿತಗೊಂಡ ಸರ್ಕಾರಿ ಸ್ವಾಮ್ಯದ ಸಿಸಿಐ ಸಿಮೆಂಟ್ ಕಾರ್ಖಾನೆ ಮಾರಾಟ ಮಾಡಲಾಗುತ್ತಿದೆಯೇ? ಅದರ ಮಾಹಿತಿ ನೀಡಿ.
ಉತ್ತರ: ಕುರಕುಂಟಾದ ಸಿಸಿಐ ಸಿಮೆಂಟ್ ಕಾರ್ಖಾನೆ ಮಾರಾಟ ಮಾಡುವ ಸಂಬಂಧ ಸದ್ಯಕ್ಕೆ ಯಾವುದೇ ರೀತಿಯ ಮಾಹಿತಿ ನಮ್ಮಲ್ಲಿಲ್ಲ.