ಕಲಬುರಗಿ: ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡದೆ ಕರ್ತವ್ಯಲೋಪ ಎಸಗಿರುವ ಆರೋಪ ಹಾಗು ಸೇವೆಗೆ ಅನಧಿಕೃತ ಗೈರು ಹಿನ್ನೆಲೆ ಅಫಜಲಪುರ ತಾಲೂಕು ಬಿಲ್ವಾಡ್ (ಕೆ) ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ(Bilwad (K) Govt School ) ಪ್ರಭಾರಿ ಮುಖ್ಯ ಶಿಕ್ಷಕ ಚಂದ್ರಕಾಂತ ವಂದಾಲ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಡಿಡಿಪಿಐ(DDPI) ಆದೇಶ ಹೊರಡಿಸಿದ್ದಾರೆ.
ಕರ್ತವ್ಯ ಲೋಪ ಆರೋಪ: ಬಿಲ್ವಾಡ್(ಕೆ) ಸರ್ಕಾರಿ ಶಾಲೆ ಪ್ರಭಾರಿ ಮುಖ್ಯ ಶಿಕ್ಷಕ ಅಮಾನತು
ಕರ್ತವ್ಯಲೋಪ ಎಸಗಿರುವ ಆರೋಪದಡಿ ಅಫಜಲಪುರ ತಾಲೂಕು ಬಿಲ್ವಾಡ್ (ಕೆ) ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ(Bilwad (K) Govt School) ಪ್ರಭಾರಿ ಮುಖ್ಯ ಶಿಕ್ಷಕ ಚಂದ್ರಕಾಂತ ವಂದಾಲ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಶೋಕ ಭಜಂತ್ರಿ ಆದೇಶ ಹೊರಡಿಸಿದ್ದಾರೆ.
ನ.17ರಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಷ್ ಶಶಿ ಶಾಲೆಗೆ ದಿಢೀರ್ ಭೇಟಿ ನೀಡಿದ್ದರು. ಈ ವೇಳೆ ಚಂದ್ರಕಾಂತ ವಂದಾಲ್ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡದಿರುವುದು ಬೆಳಕಿಗೆ ಬಂದಿತ್ತು. ಅಲ್ಲದೆ ಕ್ಷೀರಭಾಗ್ಯ ಯೋಜನೆ ಅಡಿಯಲ್ಲಿ ಮಕ್ಕಳಿಗೆ ಹಾಲು ವಿತರಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದರು. ಮೇಲಾಧಿಕಾರಿಗಳ ಗಮನಕ್ಕೆ ತರದೆ ಸೆಪ್ಟೆಂಬರ್ 6 ರಿಂದ 11 ವರೆಗೆ ಅನಧಿಕೃತವಾಗಿ ಕರ್ತವ್ಯಕ್ಕೆ ಗೈರಾಗಿ ಕರ್ತವ್ಯ ಲೋಪವೆಸಗಿರುವುದು ಬೆಳಕಿಗೆ ಬಂದಿತ್ತು.
ಸೇವೆಗೆ ಹಾಜರಾಗದೆ ಶಿಕ್ಷಕರ ಹಾಜರಿ ಪುಸ್ತಕದಲ್ಲಿ ಸಹಿ ಮಾಡಿ ಅಧಿಕಾರ ದುರುಪಯೋಗ ಮಾಡಿಕೊಂಡಿರುವುದು ಕಂಡು ಬಂದಿತ್ತು. ಕರ್ನಾಟಕ ನಾಗರಿಕ ಸೇವಾ ನಡತೆ ನಿಯಮಾವಳಿ 1957 ನಿಯಮ 12ರ ಅನ್ವಯ ಗೈರು ಹಾಜರಾಗಿರುವ ಕುರಿತಾಗಿ ಕಾರಣ ಕೇಳಿ ನೋಟಿಸ್ ನೀಡಿದ್ದರೂ, ಲಿಖಿತ ಉತ್ತರ ನೀಡಿಲ್ಲದ ಕಾರಣ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಶೋಕ್ ಭಜಂತ್ರಿ ಅವರು ಚಂದ್ರಕಾಂತ ವಂದಾಲ್‌ರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.