ಕಲಬುರಗಿ: ಪಿಎಸ್ಐ ಹುದ್ದೆ ನೇಮಕಾತಿ ಅಕ್ರಮದಲ್ಲಿ ಬಂಧಿತನಾದ ಕೆಎಸ್ಆರ್‌ಪಿ ಅಸಿಸ್ಟೆಂಟ್ ಕಮಾಂಡೆಂಟ್ ಅನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಪ್ರಕರಣದ ಕಿಂಗ್‌ಪಿನ್ ಜೊತೆ ಇವರು ಒಡನಾಟ ಹೊಂದಿದ್ದರು ಎಂದು ತನಿಖೆಯ ಮೂಲಕ ತಿಳಿದು ಬಂದಿದೆ.
ಅಭ್ಯರ್ಥಿಗಳು ಹಾಗೂ ಕಿಂಗ್‌ಪಿನ್ ನಡುವೆ ಸೇತುವೆಯಾಗಿ ಕೆಎಸ್ಆರ್‌ಪಿ ಅಸಿಸ್ಟೆಂಟ್ ಕಮಾಂಡೆಂಟ್ ಕೆಲಸ ಮಾಡುತ್ತಿದ್ದರು. ಅಭ್ಯರ್ಥಿಗಳನ್ನು ಹುಡುಕಿ ಅಕ್ರಮದ ವ್ಯವಹಾರ ಕುದುರಿಸಿದ್ದಾರೆ ಎಂಬ ಗುರುತರ ಆರೋಪವೂ ಇವರ ಮೇಲಿದೆ. ಸಿಐಡಿ ವಿಚಾರಣೆ ವೇಳೆ ಕಿಂಗ್‌ಪಿನ್ ಬಿಟ್ಟುಕೊಟ್ಟ ಸುಳಿವಿನ ಆಧಾರದಲ್ಲಿ ಮೇ 06 ರಂದು ಆರೋಪಿಯನ್ನು ಸಿಐಡಿ ಬಂಧಿಸಿ ವಿಚಾರಣೆಗೊಳಪಡಿಸಿದ್ದರು.
ಇದನ್ನೂ ಓದಿ:ಪಿಎಸ್ಐ ನೇಮಕಾತಿ ಅಕ್ರಮ: ಕೆಎಸ್ಆರ್ಪಿ ಡಿಎಸ್‌ಪಿ ಅಧಿಕಾರಿ ಸಿಐಡಿ ವಶಕ್ಕೆ
ಕಲಬುರಗಿ ಕೆಎಸ್‌ಆರ್‌ಪಿ ಪರೇಡ್ ಮೈದಾನದಲ್ಲಿ ತರಬೇತಿ ಪೂರ್ಣಗೊಂಡ ಅಭ್ಯರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಕೆಎಸ್ಆರ್‌ಪಿ ಅಸಿಸ್ಟೆಂಟ್ ಕಮಾಂಡೆಂಟ್ ಪಾಲ್ಗೊಂಡಿದ್ದರು. ಕಾರ್ಯಕ್ರಮ ಮುಗಿದ ಕೆಲ ಗಂಟೆಯಲ್ಲಿಯೇ ಇವರ ಬಂಧನವಾಗಿದೆ. ಇವರ ಧರ್ಮಪತ್ನಿ ಕಲಬುರಗಿ ಜೈಲಾಧಿಕಾರಿ ಆಗಿದ್ದಾರೆ. ಪತ್ನಿ ಕೆಲಸ ಮಾಡುವ ಕಾರಾಗೃಹಕ್ಕೆ ಅಸಿಸ್ಟೆಂಟ್ ಕಮಾಂಡೆಂಟ್ ಅತಿಥಿ ಆಗಿದ್ದಾರೆ.
ಜೈಲಿಗೆ ಶಿಫ್ಟ್:ಪ್ರಕರಣದಲ್ಲಿ ಭಾಗಿಯಾಗಿರುವ ಇಬ್ಬರು ಪೊಲೀಸ್ ಅಧಿಕಾರಿಗಳು ಇದೀಗ ಜೈಲು ಸೇರಿದ್ದಾರೆ. ಅಮಾನತುಗೊಂಡ ಅಸಿಸ್ಟೆಂಟ್ ಕಮಾಂಡೆಂಟ್ ಹಾಗೂ ಸಿಪಿಐ ಇಬ್ಬರನ್ನು ಕಲಬುರಗಿ ಸೆಂಟ್ರಲ್ ಜೈಲಿಗೆ ರವಾನಿಸಲಾಗಿದೆ. ಇವರ ಕಸ್ಟಡಿ ಅವಧಿ ಅಂತ್ಯವಾಗಿದ್ದು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಕಲಬುರಗಿ ಜೈಲಿಗೆ ಶಿಫ್ಟ್ ಮಾಡಲಾಗಿದೆ.