ಕರ್ನಾಟಕ

karnataka

ಹಿಜಾಬ್​​-ಕೇಸರಿ ಶಾಲು ವಿವಾದ : ಜಿಲ್ಲೆಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ

By

Published : Feb 12, 2022, 7:45 PM IST

ಹಿಜಾಬ್​​-ಕೇಸರಿ ಶಾಲು ವಿವಾದ ಹಿನ್ನೆಲೆ ಕಲಬುರಗಿ, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ, ಪೊಲೀಸ್​ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗಿದೆ..

Action to maintain law and order in kalaburagi chamarajanagara kodagu
ಹಿಜಾಬ್​​-ಕೇಸರಿ ಶಾಲು ವಿವಾದ: ಜಿಲ್ಲೆಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ

ಕಲಬುರಗಿ/ಚಾಮರಾಜನಗರ/ಕೊಡಗು: ಹಿಜಾಬ್​​-ಕೇಸರಿ ಶಾಲು ವಿವಾದ ಹಿನ್ನೆಲೆ ಕಲಬುರಗಿ, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ, ಪೊಲೀಸ್​ ಇಲಾಖೆಯಿಂದ ಕ್ರಮಕೈಗೊಳ್ಳಲಾಗಿದೆ.

ಕಲಬುರಗಿ : ಹಿಜಾಬ್ ಹಾಗೂ ಕೇಸರಿ ವಿವಾದ ಹಿನ್ನೆಲೆ ಕಲಬುರಗಿ ನಗರದಲ್ಲಿ ಪ್ರತಿಭಟನೆ ನಿಷೇಧಿಸಿ ಕಲಬುರಗಿ ನಗರ ಪೊಲೀಸ್ ಕಮಿಷನರ್ ಆದೇಶಿಸಿದ್ದಾರೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕಲಬುರಗಿ ನಗರದಲ್ಲಿ ಹಿಜಾಬ್ ಪರ ಹಾಗೂ ವಿರುದ್ಧ ಪ್ರತಿಭಟನೆ ಹಾಗೂ ಹೋರಾಟಗಳು ನಡೆಸುವಂತಿಲ್ಲ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವದಂತಿ, ಸುಳ್ಳು ಸುದ್ದಿ ಹರಡಿಸುವುದು ಸೇರಿದಂತೆ ಪ್ರಚೋದನಕಾರಿ ಹೇಳಿಕೆ, ಭಿತ್ತಿಚಿತ್ರಗಳು ಅಥವಾ ಯಾವುದೇ ವಸ್ತುಗಳನ್ನು ಪ್ರದರ್ಶಿಸಿಸಿ ನಿಯಮ ಉಲ್ಲಂಘನೆ ಮಾಡಿದರೆ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ‌.

ಚಾಮರಾಜನಗರ :ಹಿಜಾಬ್ ಹಾಗೂ ಕೇಸರಿ ವಿವಾದದ ನಡುವೆ ಹೈಕೋರ್ಟ್​ ಮಧ್ಯಂತರ ಆದೇಶ ಹೊರಡಿಸಿದ ಹಿನ್ನೆಲೆ ಶಾಲಾ-ಕಾಲೇಜುಗಳನ್ನು ಪುನಾರಂಭಿಸುತ್ತಿರುವುದರಿಂದ ಶಾಲಾ-ಕಾಲೇಜು ಸುತ್ತ ನಿಷೇಧಾಜ್ಞೆ ಜಾರಿಗೊಳಿಸಿ ಚಾಮರಾಜನಗರ ಡಿಸಿ ಚಾರುಲತಾ ಸೋಮಲ್ ಆದೇಶಿಸಿದ್ದಾರೆ.

ಚಾಮರಾಜನಗರದಲ್ಲಿ ಸಭೆ

ಫೆ-14ರ ಬೆಳಗ್ಗೆ 9 ರಿಂದ 19ರ ಸಂಜೆ 5 ಗಂಟೆಯವರೆಗೆ ಜಿಲ್ಲಾದ್ಯಂತ ಇರುವ ಎಲ್ಲಾ ಶಾಲಾ-ಕಾಲೇಜುಗಳ ಸುತ್ತ 200 ಮೀಟರ್‌ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಇಂದು ಬೆಳಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಟಿ‌‌.ಪಿ‌ .ಶಿವಕುಮಾರ್ ಮತ್ತು ಇನ್ನಿತರೆ ಪೊಲೀಸ್ ಅಧಿಕಾರಿಗಳು ಶಿಕ್ಷಣಾಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳೊಟ್ಟಿಗೆ ಶಾಲಾ-ಕಾಲೇಜು ಪುನಾರಂಭ ಸಂಬಂಧ ಸಭೆ ನಡೆಸಿದ್ದಾರೆ.

ವಿದ್ಯಾರ್ಥಿಗಳು ಯಾವುದೇ ಆತಂಕ ಇಲ್ಲದೇ ಶಾಲಾ-ಕಾಲೇಜಿಗೆ ಬರಬೇಕು. ಶಾಲಾ-ಕಾಲೇಜು ಸುತ್ತಮತ್ತ ಸೂಕ್ತ ಪೊಲೀಸ್ ಬಂದೋಬಸ್ತ್ ಇರಲಿದ್ದು, ಪೊಲೀಸ್ ಪ್ಯಾಟ್ರೋಲಿಂಗ್, ಈಆರ್​ಎಸ್​ಎಸ್​​-112 ವಾಹನಗಳು, ಪಿಎಸ್ಐ, ಎಎಸ್ಐಗಳನ್ನು ನಿಯೋಜಿಸಲಾಗಿದೆ. ಸಣ್ಣ ಅಹಿತಕರ ಘಟನೆಯೂ ನಡೆಯದಂತೆ ಕ್ರಮಕೈಗೊಳ್ಳಲಾಗಿದೆ.

ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ

ಕೊಡಗು :ಶಾಲಾ-ಕಾಲೇಜುಗಳಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಎಲ್ಲರೂ ಸಹಕರಿಸುವಂತೆ ವಿವಿಧ ಧಾರ್ಮಿಕ ಮುಖಂಡರಲ್ಲಿ ಕೊಡಗು ಜಿಲ್ಲಾಡಳಿತ ಮನವಿ ಮಾಡಿದೆ.

ಶಾಲಾ-ಕಾಲೇಜು ಆರಂಭ ಹಿನ್ನೆಲೆ ಜಿಲ್ಲಾಧಿಕಾರಿ ಡಾ.ಬಿ ಸಿ ಸತೀಶ್‌ ಅವರ ಅಧ್ಯಕ್ಷತೆಯಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಹಾಗೂ ಜಿಪಂ ಸಿಇಒ ಭನ್ವರ್ ಸಿಂಗ್ ಮೀನಾ ಮತ್ತು ವಿವಿಧ ಧಾರ್ಮಿಕ ಮುಖಂಡರು, ಅಧಿಕಾರಿಗಳು ಹಾಗೂ ಪ್ರಾಂಶುಪಾಲರ ಉಪಸ್ಥಿತಿಯಲ್ಲಿ ಇಂದು ಪೂರ್ವಭಾವಿ ಸಭೆ ನಡೆಯಿತು.

ಜಿಲ್ಲಾಡಳಿತ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತಂತೆ ಜಿಲ್ಲಾಧಿಕಾರಿ ಡಾ.ಬಿ ಸಿ ಸತೀಶ್‌ ಮಾತನಾಡಿರುವುದು..

ಜಿಲ್ಲಾಧಿಕಾರಿ ಡಾ.ಬಿ ಸಿ ಸತೀಶ್‌ ಮಾತನಾಡಿ, ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‍ನಲ್ಲಿ ದಾಖಲಾಗಿರುವ ರಿಟ್ ಅರ್ಜಿಗಳ ವಿಚಾರಣೆ ಇತ್ಯರ್ಥ ಆಗುವ ತನಕ, ವಿದ್ಯಾರ್ಥಿಗಳು ತರಗತಿಗಳಿಗೆ ಕೇಸರಿ ಶಾಲು, ಹಿಜಾಬ್ ಧರಿಸಿ ಪ್ರವೇಶಿಸುವಂತಿಲ್ಲ ಹಾಗೂ ಧಾರ್ಮಿಕ ಸಂಕೇತದ ಬಾವುಟಗಳನ್ನು ಪ್ರದರ್ಶನ ಮಾಡುವಂತಿಲ್ಲ ಎಂದು ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ. ಅದನ್ನು ಪ್ರತಿಯೊಬ್ಬರೂ ಕಟ್ಟುನಿಟ್ಟಾಗಿ ಪಾಲಿಸುವಂತೆ ಕೋರಿದರು.

ಕಳೆದ ಎರಡು ವರ್ಷದಿಂದ ಕೋವಿಡ್-19ನಿಂದಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬಾ ತೊಂದರೆ ಆಗಿದೆ. ಹಾಗಾಗಿ, ಮಕ್ಕಳ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಬೇಕು. ಮಕ್ಕಳ ಭವಿಷ್ಯ ಬಗ್ಗೆ ಯೋಚಿಸಬೇಕಿದೆ. ಆ ನಿಟ್ಟಿನಲ್ಲಿ ಯಾರೂ ಸಹ ಧರ್ಮ ಮತ್ತು ಸಂಸ್ಕೃತಿ ಹೆಸರಿನಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಬಾರದು ಎಂದು ಜಿಲ್ಲಾಧಿಕಾರಿ ಹೇಳಿದರು.

ಇದನ್ನೂ ಓದಿ:ಸೋಮವಾರ ಬೆಳಗ್ಗೆ 6ರಿಂದ ಮಂಗಳವಾರ ಸಂಜೆ 6 ಗಂಟೆವರೆಗೂ ದಾವಣಗೆರೆಯಲ್ಲಿ ನಿಷೇಧಾಜ್ಞೆ.. ಮೊಬೈಲ್ ಬ್ಯಾನ್‌..

ತಾಲೂಕು ಮಟ್ಟದಲ್ಲಿ ವಿವಿಧ ಧಾರ್ಮಿಕ ಮುಖಂಡರು, ಅಧಿಕಾರಿಗಳು ಹಾಗೂ ಪೋಷಕರ ಸಭೆ ನಡೆಸಿ, ಹೈಕೋರ್ಟ್ ಮಧ್ಯಂತರ ಆದೇಶದ ಬಗ್ಗೆ ಮಾಹಿತಿ ನಿಡಬೇಕು. ಹೈಕೋರ್ಟ್ ಮಧ್ಯಂತರ ಆದೇಶವನ್ನು ಯಥಾವತ್ತಾಗಿ ಪಾಲಿಸಬೇಕು. ಕೊಡಗು ಜಿಲ್ಲೆಯಲ್ಲಿ ಸೌಹಾರ್ದತೆ ಕಾಪಾಡುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬಿ ಸಿ ಸತೀಶ್‌ ಅವರು ಮನವಿ ಮಾಡಿದರು.

ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ವಿದ್ಯಾರ್ಥಿ ನಿಲಯಗಳಲ್ಲಿ ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶ ನೀಡದೇ, ನಿಯಮಗಳನ್ನು ಪಾಲಿಸಬೇಕು. ಆ ನಿಟ್ಟಿನಲ್ಲಿ ಮಾಹಿತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ABOUT THE AUTHOR

...view details