ಹುಬ್ಬಳ್ಳಿ: ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಅವರು ಆಗಸ್ಟ್ 20 ಹಾಗೂ 22 ರಂದು ಹುಬ್ಬಳ್ಳಿಗೆ ಭೇಟಿ ನೀಡಲಿದ್ದಾರೆ. ಆ. 20 ರಂದು ಸಂಜೆ 4-15 ಗಂಟೆಗೆ ಭಾರತೀಯ ವಾಯುಸೇನೆಯ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.
ಸಂಜೆ 4-25ಕ್ಕೆ ವಿಶೇಷ ಹೆಲಿಕಾಪ್ಟರ್ ಮೂಲಕ ಹೊಸಪೇಟೆಗೆ ತೆರಳಲಿದ್ದಾರೆ. ಆ.22 ರಂದು ಬೆಳಗ್ಗೆ 9-50ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. 10-05ಕ್ಕೆ ಅನಂತ ಗ್ರ್ಯಾಂಡ್ ಹೋಟೆಲ್‍ನ ಖಾಸಗಿ ಕಾರ್ಯಕ್ರಮಕ್ಕೆ ತೆರಳುವರು. 10-25ಕ್ಕೆ ಭಾರತೀಯ ವಾಯುಸೇನೆಯ ವಿಶೇಷ ವಿಮಾನದ ಮೂಲಕ ದೆಹಲಿಗೆ ಪ್ರಯಾಣ ಬೆಳೆಸುವರು ಎಂದು ಪ್ರಕಟಣೆ ತಿಳಿಸಿದೆ.
ವಿಜಯನಗರ ಜಿಲ್ಲೆಗೆ ಭೇಟಿ:
ವಿಜಯನಗರ ಜಿಲ್ಲೆಗೆ ಭೇಟಿ ನೀಡಲಿದ್ದು, ತುಂಗಭದ್ರಾ ಜಲಾಶಯ, ಹಂಪಿಯ ವಿವಿಧ ಸ್ಮಾರಕಗಳನ್ನು ವೀಕ್ಷಿಸಲಿದ್ದಾರೆ. ಉಪರಾಷ್ಟ್ರಪತಿ ಭೇಟಿ ಹಿನ್ನೆಲೆ ಜಿಲ್ಲಾಡಳಿತ ವಿವಿಧ ತಂಡಗಳನ್ನು ನೇಮಿಸಿದ್ದು, ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಆ. 20ರಂದು ಸಂಜೆ 5:20ಕ್ಕೆ ವಾಯುಸೇನೆಯ ವಿಶೇಷ ಹೆಲಿಕ್ಯಾಪ್ಟರ್ನಲ್ಲಿ ವೆಂಕಯ್ಯ ನಾಯ್ಡು ಕುಟುಂಬ ಸಮೇತ ನಗರದ ಮುನ್ಸಿಪಲ್ ಮೈದಾನಕ್ಕೆ ಬಂದಿಳಿಯಲಿದ್ದಾರೆ. ಅಲ್ಲಿಂದ ನೇರವಾಗಿ ತುಂಗಭದ್ರಾ ಜಲಾಶಯಕ್ಕೆ ರಸ್ತೆ ಮಾರ್ಗವಾಗಿ ತೆರಳಿ ವೀಕ್ಷಣೆ ನಡೆಸಲಿದ್ದಾರೆ. ನಂತರ ರಸ್ತೆ ಮಾರ್ಗವಾಗಿ ಆಗಮಿಸಿ ಹಂಪಿ-ಕಮಲಾಪುರ ಸಮೀಪದ ಮಯೂರಭುವನೇಶ್ವರಿ ಸರ್ಕಾರಿ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಇದನ್ನೂ ಓದಿ:ಸುವರ್ಣಸೌಧಕ್ಕೆ ಕಚೇರಿ ಸ್ಥಳಾಂತರ: ಗುರುವಿನ ಕನಸು ನನಸು ಮಾಡುವರೇ ಬೊಮ್ಮಾಯಿ..!
ಆ.21ರಂದು ಬೆಳಗ್ಗೆ 9.55ಕ್ಕೆ ಮಯೂರಭುವನೇಶ್ವರಿ ಅತಿಥಿಗೃಹ(ಹೋಟಲ್)ದಿಂದ ಕುಟುಂಬ ಸಮೇತ ರಸ್ತೆ ಮಾರ್ಗವಾಗಿ ಹಂಪಿಗೆ ತೆರಳಿ ಯುನೆಸ್ಕೋ ವಿಶ್ವಪಾರಂಪರಿಕ ತಾಣಗಳನ್ನು ವೀಕ್ಷಿಸಲಿದ್ದಾರೆ. ನಂತರ ಅವರು ಮರಳಿ ಮಯೂರ ಭುವನೇಶ್ವರಿ ಅತಿಥಿಗೃಹ(ಹೋಟಲ್)ಕ್ಕೆ ಬೆಳಗ್ಗೆ 11.35ಕ್ಕೆ ಮರಳಲಿದ್ದಾರೆ ಮತ್ತು ರಾತ್ರಿ ಅಲ್ಲಿಯೇ ವಾಸ್ತವ್ಯ ಮಾಡಲಿದ್ದಾರೆ. ಮರುದಿನ(ಆ.22) ಬೆಳಗ್ಗೆ 8.50ಕ್ಕೆ ಮುನ್ಸಿಪಲ್ ಮೈದಾನದ ಹೆಲಿಪ್ಯಾಡ್ನಿಂದ ವಾಯುಸೇನೆಯ ವಿಶೇಷ ಹೆಲಿಕ್ಯಾಪ್ಟರ್ನಲ್ಲಿ ಹುಬ್ಬಳ್ಳಿಗೆ ಮರಳಲಿದ್ದಾರೆ.