ಹುಬ್ಬಳ್ಳಿ :ರಾಜ್ಯದಲ್ಲಿ ಹೊಸ ವರ್ಷ ಯುಗಾದಿಯ ಸಂಭ್ರಮ ಕಳೆಗಟ್ಟಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೂ ಯುಗಾದಿ ಹಬ್ಬದ ಸಡಗರ ಮನೆ ಮಾಡಿದೆ. ಯುಗಾದಿ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ. ನಗರದ ಪ್ರಮುಖ ದೇವಾಲಯಗಳಲ್ಲಿ ಸರದಿ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನ ಪಡೆಯುತ್ತಿದ್ದಾರೆ. ಇಲ್ಲಿನ ಉಣಕಲ್ ನ ಚಂದ್ರಮೌಳೇಶ್ವರ ದೇವಸ್ಥಾನದಲ್ಲೂ ಯುಗಾದಿ ಸಂಭ್ರಮ ಕಳೆಗಟ್ಟಿದೆ.
ಇಂದು ಮುಂಜಾನೆಯ ಸೂರ್ಯ ರಶ್ಮಿ ಶಿವಲಿಂಗವನ್ನು ಸ್ಪರ್ಶಿಸುವ ಘಳಿಗೆಯನ್ನು ಭಕ್ತರು ಕಣ್ತುಂಬಿಕೊಂಡಿದ್ದಾರೆ. ಶತಮಾನಗಳಷ್ಟು ಹಳೆಯದಾದ ಚಂದ್ರಮೌಳೇಶ್ವರನ ದರ್ಶನ ಪಡೆದರೆ ಇಷ್ಟಾರ್ಥಗಳು ಈಡೇರುತ್ತದೆ ಎಂಬ ನಂಬಿಕೆ ಇಲ್ಲಿನ ಜನರದ್ದಾಗಿದೆ. ಈ ಹಿನ್ನೆಲೆಯಲ್ಲಿ ಯುಗಾದಿ ದಿನದಂದು ದೇವಸ್ಥಾನಕ್ಕೆ ಭೇಟಿ ನೀಡಿ ಸೂರ್ಯ ರಶ್ಮಿ ಶಿವಲಿಂಗ ಸ್ಪರ್ಶಿಸುವುದರ ದರ್ಶನ ಪಡೆಯುತ್ತಾರೆ.