ಹುಬ್ಬಳ್ಳಿ: ಪತ್ನಿಯ ಶೀಲ ಶಂಕಿಸಿ 2019 ರಲ್ಲಿ ಕೊಲೆ ಮಾಡಿದ್ದ ಅಪರಾಧಿ ಪತಿಗೆ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 50,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಗದಗ ರಸ್ತೆ ಚಾಲುಕ್ಯ ನಗರದ ನಿವಾಸಿ ಕಿಶೋರ ಬೊಮ್ಮಾಜಿ ಶಿಕ್ಷೆಗೀಡಾದ ಅಪರಾಧಿ.
ಕಿಶೋರ 2011ರಲ್ಲಿ ಆಂಧ್ರಪ್ರದೇಶ ಗುಂಟೂರು ಮೂಲದ ಲವೀನಾರನ್ನು ವಿವಾಹವಾಗಿದ್ದರು. ದಂಪತಿಗೆ ಒಂದು ಹೆಣ್ಣು ಮಗು ಜನಿಸಿತ್ತು. ಹೆಂಡತಿ ಶೀಲ ಶಂಕಿಸಿ ಕಿಶೋರ ಆಗಾಗ ಜಗಳವಾಡುತ್ತಿದ್ದ. ತಂದೆ- ತಾಯಿ ಜತೆ ಮಾತನಾಡಲೆಂದು ಪರಿಚಯಸ್ಥರೊಬ್ಬರಿಂದ ಲವೀನಾ ಮೊಬೈಲ್ ಫೋನ್ ಪಡೆದಿದ್ದಳು. ಇದರಿಂದ ಮತ್ತಷ್ಟು ಸಂಶಯಪಟ್ಟು ಜಗಳ ತೆಗೆದಿದ್ದ. 2018ರ ಮಾ.23 ರಂದು ಕುತ್ತಿಗೆಗೆ ವೈರ್‌ನಿಂದ ಬಿಗಿದು ಕೊಲೆ ಮಾಡಿದ್ದ. ನಂತರ ಆಕೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬಂತೆ ಬಿಂಬಿಸಲು ಯತ್ನಿಸಿದ್ದ.