ಹುಬ್ಬಳ್ಳಿ (ಧಾರವಾಡ) :ಹಿಜಾಬ್ ವಿವಾದ ನ್ಯಾಯಾಲಯದಲ್ಲಿದೆ. ಪ್ರಕರಣ ನ್ಯಾಯಾಲಯದಲ್ಲಿರುವಾಗಲೇ ದುರದ್ದೇಶದಿಂದ ಗಲಾಟೆ ಮಾಡಲಾಗುತ್ತಿದೆ. ನ್ಯಾಯಾಲಯದ ಮಧ್ಯಂತರ ಆದೇಶ ಎಲ್ಲಿ ಪಾಲನೆ ಆಗುತ್ತಿಲ್ಲವೋ ಅಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.
ನಗರದಲ್ಲಿಂದು ಮಾತನಾಡಿದ ಅವರು, ನ್ಯಾಯಾಲಯ ಅಂತಿಮ ಆದೇಶವನ್ನು ಹಿಜಾಬ್ ಪರ ಅಥವಾ ವಿರುದ್ಧವಾದರೂ ಕೊಡಲಿ. ಅದನ್ನು ನಾವು ಪಾಲನೆ ಮಾಡಬೇಕಾಗುತ್ತದೆ. ಆದ್ರೆ, ಆದೇಶ ವಿರುದ್ಧವಾಗಿ ಬಂದ್ರೆ ಹಿಜಾಬ್ ಹಾಕೇ ಹಾಕುತ್ತೇವೆ ಅನ್ನೋದು ಸರಿಯಲ್ಲ ಎಂದರು.
ಹಿಜಾಬ್-ಕೇಸರಿ ಶಾಲು ವಿವಾದದ ಕುರಿತಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿರುವುದು.. ಶಾಲೆ ಮತ್ತು ಕಾಲೇಜುಗಳಿಗೆ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಿ. ಹಿಜಾಬ್ ಹಾಕಿಸೋಕೆ ಅಥವಾ ತೆಗಿಸೋಕೆ ಯಾರೇ ಬಂದರೂ ಅವರನ್ನು ಒದ್ದು ಒಳಗೆ ಹಾಕಿ. ಸರ್ಕಾರ ಎಷ್ಟು ದಿನ ಇವರನ್ನು ಸಂಬಾಳಿಸಬೇಕು. ಗಲಾಟೆ ಮಾಡುವವರ ವಿರುದ್ಧ ನಿರ್ದಾಕ್ಷಣ್ಯವಾಗಿ ಕ್ರಮಕ್ಕೆ ಮುಂದಾಗಬೇಕು ಎಂದರು.
ಇದನ್ನೂ ಓದಿ:ಅಹೋರಾತ್ರಿ ಧರಣಿ ವೇಳೆ ಕೈ ನಾಯಕರ ಚಿಂತನ-ಮಂಥನ ಸಭೆ.. ಸಿದ್ದು-ಡಿಕೆಶಿ ಒಗ್ಗಟ್ಟಿಗೆ ಶಾಸಕರ ಸಲಹೆ..
ಕಾಂಗ್ರೆಸ್ ಧರಣಿ ಕುರಿತು ಪ್ರತಿಕ್ರಿಯಿಸಿ, ಪ್ರತಿಭಟನೆ ಮಾಡುವುದೇ ಅವರ ಕಾಯಕವಾಗಿದೆ. ಅವರಿಗೆ ದೇವರು ಆದಷ್ಟು ಬೇಗ ಸದ್ಬುದ್ಧಿ ನೀಡಲಿ. ರಾಜ್ಯದಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿವೆ. ಅವುಗಳ ಪರಿಹಾರಕ್ಕೆ ವಿಪಕ್ಷಗಳು ಸರ್ಕಾರಕ್ಕೆ ಸಲಹೆ ನೀಡಬೇಕಿದೆ. ಅದನ್ನು ಬಿಟ್ಟು ಈ ರೀತಿ ಪ್ರತಿಭಟನೆಗೆ ಮುಂದಾಗಿದ್ದು ಸರಿಯಲ್ಲ ಎಂದರು.