ಹುಬ್ಬಳ್ಳಿ: ಕೊರೊನಾ ಹಾಗೂ ಲಾಕ್ಡೌನ್ನಿಂದಾಗಿ ದೇಶದ ಎಲ್ಲಾ ಉದ್ಯಮಗಳು ನಷ್ಟಕ್ಕೆ ಸಿಲುಕಿವೆ. ಈ ನಡುವೆ ಜವಳಿ ಉದ್ಯಮ ಸಹ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಏಪ್ರಿಲ್, ಮೇ ತಿಂಗಳಲ್ಲಿ ಶುಭ ಕಾರ್ಯಕ್ಕೆಂದು ಜವಳಿ ವ್ಯಾಪಾರ ಭರ್ಜರಿಯಾಗಿ ನಡೆಯಬೇಕಿತ್ತು. ಆದರೆ ಈ ಬಾರಿ ಕೊರೊನಾದಿಂದಾಗಿ ವ್ಯಾಪಾರಸ್ಥರ ನಿರೀಕ್ಷೆ ಹುಸಿಯಾಗಿದೆ. ಪರಿಣಾಮ ಕೋಟಿಗೂ ಅಧಿಕ ನಷ್ಟ ಅನುಭವಿಸುವಂತೆ ಮಾಡಿದೆ.
ಇನ್ನು ಉದ್ಯೋಗವಿಲ್ಲದೇ ಸಾವಿರಾರು ಜವಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಸಹ ಬೀದಿಗೆ ಬಂದಿದ್ದಾರೆ. ಬಹಳ ಕಾಲದಿಂದಲೂ ಉತ್ತರ ಕರ್ನಾಟಕ ಭಾಗದಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿ ಪ್ರಮುಖ ಜವಳಿ ವ್ಯಾಪಾರದ ಕೇಂದ್ರವಾಗಿದೆ. ಧಾರವಾಡ, ಉತ್ತರ ಕನ್ನಡ, ಹಾವೇರಿ, ಗದಗ ಮಾತ್ರವಲ್ಲದೆ ಮಂಗಳೂರಿನವರೆಗೂ ಇಲ್ಲಿನ ಬಟ್ಟೆ ವ್ಯಾಪರ ಹಬ್ಬಿದೆ. ಇತರ ಜಿಲ್ಲೆಗಳ ವ್ಯಾಪಾರಿಗಳು ಕೂಡ ಇಲ್ಲಿಂದಲೇ ಬಟ್ಟೆಗಳನ್ನು ತೆಗೆದುಕೊಂಡು ಹೋಗುತ್ತಾರೆ.