ಹುಬ್ಬಳ್ಳಿ: ಉತ್ತರ ಕರ್ನಾಟಕ ಜನರ ಸಂಜೀವಿನಿಯಾಗಿರುವ ಕಿಮ್ಸ್ ಉತ್ತಮ ಚಿಕಿತ್ಸೆ ನೀಡುವ ಮೂಲಕ ಹೆಸರುವಾಸಿಯಾಗಿದೆ. ಇದೀಗ ಕರ್ನಾಟಕ ವೈದ್ಯಕೀಯ ಶಿಕ್ಷಣ ಸಂಸ್ಥೆ ಮತ್ತೊಂದು ಸೇವೆಯಿಂದ ಜನಮನ್ನಣೆ ಪಡೆಯಲು ಮುಂದಾಗಿದೆ.
ರೋಗಿಗಳಿಗೆ ಮತ್ತೊಂದು ಸೇವೆ ನೀಡಲು ಮುಂದಾದ ಕಿಮ್ಸ್
ಕಿಮ್ಸ್ ನಾನಾ ವಿಭಾಗಗಳಲ್ಲಿ ಸರಾಸರಿ 1,300-1,500 ಒಳ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಷ್ಟೆಲ್ಲಾ ರೋಗಿಗಳಿಗೆ ಅವರ ಚಿಕಿತ್ಸೆಗೆ ಅನುಗುಣವಾಗಿ ಊಟ ಪೂರೈಸುವ ಜವಾಬ್ದಾರಿಯನ್ನು ಕಿಮ್ಸ್ ಆಡಳಿತ ಮಂಡಳಿ ಹೊತ್ತುಕೊಂಡಿದ್ದು, ಇನ್ನು ಮುಂದೆ ರೋಗಿಗಳಿಗೆ ಶುಚಿ ರುಚಿಯಾದ ಊಟೋಪಚಾರ ಸಿಗಲಿದೆ.
ಹೌದು, ಕಿಮ್ಸ್‌ನ (ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್) ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರೋಗಿಗಳಿಗೆ ನಾನಾ ಬಗೆಯ ಉಪಹಾರ ಮತ್ತು ಊಟದ ವ್ಯವಸ್ಥೆ ಜಾರಿಗೊಳಿಸಿರುವುದು ರೋಗಿಗಳಲ್ಲಿ ಸಂತಸ ಮೂಡಿಸಿದೆ. ಈ ಹೊಸ ವ್ಯವಸ್ಥೆ ಏಪ್ರಿಲ್ 1 ರಿಂದ ಜಾರಿಯಾಗಿದೆ. ಆಹಾರ ಪೂರೈಕೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡಿದ್ದು, ರೋಗಿಗಳಿಗೆ ಆರೋಗ್ಯಯುತ ಆಹಾರ ನೀಡುತ್ತಿದೆ.
ಕಿಮ್ಸ್ ನಾನಾ ವಿಭಾಗಗಳಲ್ಲಿ ಸರಾಸರಿ 1,300-1,500 ಜನರು ಒಳ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು, ಎಂಐಸಿಯುನಲ್ಲಿ ಚಿಕಿತ್ಸೆ ಪಡೆಯುವವರಿಗೆ, ಗರ್ಭಿಣಿಯರು, ಟಿಬಿ ಇತರೆ ರೋಗಿಗಳ ಆರೋಗ್ಯದ ಹಿತದೃಷ್ಟಿಯಿಂದ ಚಿಕಿತ್ಸೆಗೆ ಅನುಗುಣವಾಗಿ ಆಹಾರ ಪೂರೈಕೆ ಮಾಡಲಾಗುತ್ತದೆ. ಪ್ರತಿದಿನ ಪ್ರತಿಯೊಬ್ಬ ರೋಗಿಗೆ 68 ರೂ.ಗಳಂತೆ ಆಹಾರ ಪೂರೈಕೆ ಜವಾಬ್ದಾರಿಯನ್ನು ಗುತ್ತಿಗೆ ವಹಿಸಲಾಗಿದೆ. ಅಡುಗೆ ಮನೆ ಹೊರತುಪಡಿಸಿ ಪ್ರತಿ ಅಡುಗೆ ಸಾಮಗ್ರಿಗಳನ್ನು ಗುತ್ತಿಗೆಯವರೇ ನೋಡಿಕೊಳ್ಳಲಿದ್ದಾರೆ. ಸ್ವಚ್ಛತೆ ಕಾಯ್ದುಕೊಳ್ಳುವುದರ ಜೊತೆಗೆ ಶುದ್ಧ ಮತ್ತು ರುಚಿಕರ ಆಹಾರ ಪೂರೈಸುವ ಹೊಣೆ ನೀಡಲಾಗಿದೆ.