ಹುಬ್ಬಳ್ಳಿ:ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣಗಳ ನಡುವೆ ಅಂತಃಕರಣ ಪುನಃ ಸ್ಥಾಪನೆಯಾಗಬೇಕು. ಉದ್ಯಮಿಗಳು ಲಾಭ ನಷ್ಟದ ಜೊತೆಗೆ ಸಮಾಜದ ಮೇಲೆ ಉಂಟಾಗುವ ಪರಿಣಾಮಗಳನ್ನೂ ಅರಿತು ಹೆಜ್ಜೆಯಿಡಬೇಕು. ಕೈಗಾರಿಕೆಗಳ ಉತ್ತೇಜನಕ್ಕೆ ತೆರಿಗೆ ಪದ್ಧತಿ ಸರಳೀಕರಣಗೊಳಿಸಲು ಸ್ವಯಂ ತೆರಿಗೆ ಪದ್ಧತಿ ಜಾರಿಗೊಳಿಸಲಾಗುವುದು. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸಮಗ್ರ ಆರ್ ಆ್ಯಂಡ್ ಡಿ ನೀತಿ ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿನ ಖಾಸಗಿ ಹೋಟೆಲಿನಲ್ಲಿಂದು ಬೆಂಗಳೂರಿನ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಹಾಗೂ ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಆಯೋಜಿಸಿದ್ದ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಗಳ ರಾಜ್ಯ ಮಟ್ಟದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. 21 ನೇ ಶತಮಾನದಲ್ಲಿ ಕೈಗಾರಿಕಾ ರಂಗದಲ್ಲಿ ಮತ್ತೊಮ್ಮೆ ಮಹತ್ತರ ಬದಲಾವಣೆಗಳಾಗುತ್ತಿವೆ. ರಾಜ್ಯದಲ್ಲಿಯೂ ತೆರಿಗೆ ಸರಳೀಕರಣ ಮಾಡಿ, ಸ್ವಯಂ ಘೋಷಿತ ತೆರಿಗೆ ಪದ್ಧತಿ ಜಾರಿಗೊಳಿಸಲಾಗುವುದು. ಈ ಕುರಿತು ಉನ್ನತ ಮಟ್ಟದ ಸಭೆ ನಡೆಸಿ ಫಿಟ್‌ಮೆಂಟ್ ಅಂತಿಮಗೊಳಿಸಲಾಗುವುದು ಎಂದರು.