ಹುಬ್ಬಳ್ಳಿ :ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯ ಆವರಣದಲ್ಲಿ ನಡೆದ ಕಲ್ಲುತೂರಾಟ ಪ್ರಕರಣದ ಸಂಬಂಧ ಪೊಲೀಸರು ಈಗಾಗಲೇ ಆರೋಪಿಗಳನ್ನು ಬಂಧಿಸುತ್ತಿದ್ದಾರೆ. ಈ ಹಿಂಸಾಚಾರಕ್ಕೆ ಪ್ರಮುಖ ಸಾಕ್ಷಿಯಾಗಿದ್ದ ಸಿಸಿ ಟಿವಿಗಳನ್ನು ಪೊಲೀಸರು ತನಿಖೆಗೆ ಬಳಸಿದ್ದು, ಈ ನಡುವೆ ಹಲವು ಕಡೆಗಳಲ್ಲಿ ಸಿಸಿ ಟಿವಿಗಳಿದ್ದರೂ ಕಾರ್ಯ ನಿರ್ವಹಿಸದೇ ಇರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಹುಬ್ಬಳ್ಳಿ ಕಲ್ಲು ತೂರಾಟ ಪ್ರಕರಣ, ಆರೋಪಿಗಳ ಪತ್ತೆಗೆ ಅಡ್ಡಿಯಾದ ನಿಷ್ಕ್ರಿಯ ಸಿಸಿ ಟಿವಿಗಳು.. ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ದುಷ್ಕರ್ಮಿಗಳ ಬಂಧನಕ್ಕೆ ಯೋಜನೆ ರೂಪಿಸಿದ್ದ ಪೊಲೀಸರಿಗೆ ನಿರಾಶೆಯಾಗಿದೆ. 2000 ಗಲಭೆಕೋರರ ಪೈಕಿ ಈವರೆಗೆ ಕೇವಲ 88 ಜನರನ್ನು ಮಾತ್ರ ಬಂಧನ ಮಾಡಲಾಗಿದೆ. ಹಲವೆಡೆ ಸಿಸಿ ಟಿವಿ ಇದ್ದರೂ ಕಾರ್ಯನಿರ್ವಹಿಸದೇ ಇರುವುದೇ ಪೊಲೀಸರ ತನಿಖೆಗೆ ಅಡ್ಡಿಯುಂಟಾಗಿದೆ.
ಕಲ್ಲು ತೂರಾಟ ನಡೆದ ಹಳೇ ಹುಬ್ಬಳ್ಳಿಯ ಸುತ್ತಮುತ್ತ ಅಳವಡಿಸಿದ್ದ 48 ಸಿಸಿ ಕ್ಯಾಮೆರಾಗಳ ಪೈಕಿ ಕೇವಲ 21 ಸಿಸಿ ಕ್ಯಾಮೆರಾಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳ ಪೈಕಿ 7 ಕ್ಯಾಮೆರಾಗಳು ನಾಪತ್ತೆಯಾಗಿದ್ದು, 20 ಕ್ಯಾಮೆರಾಗಳು ನಿಷ್ಕ್ರಿಯಗೊಂಡಿವೆ. ಇದರಿಂದ ಆರೋಪಿಗಳ ಬಂಧನಕ್ಕೆ ಅಡ್ಡಿಯಾಗಿದೆ.
ಇನ್ನೂ ಸಿಸಿಟಿವಿ ಕ್ಯಾಮೆರಾ ನಿರ್ವಹಣೆ ಹೊಣೆ ಹೊತ್ತ ವರ್ಟಿಕ್ಸ್ ಏಜೆನ್ಸಿಯ ಹೊಣೆಗೇಡಿತನದಿಂದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ಪೇಚಿಗೆ ಸಿಲುಕಿದಂತಾಗಿದೆ. ಏಜೆನ್ಸಿಯ ಹೊಣಗೇಡಿತನದಿಂದ ಇಂತಹದೊಂದು ಪ್ರಕರಣವನ್ನು ಬೇಧಿಸಲು ಪೊಲೀಸ್ ಇಲಾಖೆ ಪರದಾಡುವಂತಾಗಿದೆ.
ಓದಿ :ಹುಬ್ಬಳ್ಳಿ ಗಲಭೆ ಪ್ರಕರಣ: ಇಂದು ಕೋರ್ಟ್ಗೆ ಹಾಜರಾಗಲಿರುವ ನೂರಕ್ಕೂ ಹೆಚ್ಚು ಆರೋಪಿಗಳು