ಹುಬ್ಬಳ್ಳಿ:ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಸದಸ್ಯರ ಆಯ್ಕೆಯ ಚುನಾವಣೆಯ ಫಲಿತಾಂಶ ಬಂದು ಒಂಬತ್ತು ತಿಂಗಳ ಬಳಿಕ ಮೇಯರ್ ಹಾಗೂ ಉಪಮೇಯರ್ ಆಯ್ಕೆಗೆ ಸರ್ಕಾರ ಅಧಿಸೂಚನೆ ಪ್ರಕಟಿಸಿದೆ. ಇದರ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಚಟುವಟಿಕೆ ಗರಿಗೆದರಿದೆ. ಅಧಿಸೂಚನೆಯ ಪ್ರಕಾರ ಮೇಯರ್ ಸ್ಥಾನ ಸಾಮಾನ್ಯ ವರ್ಗ ಹಾಗೂ ಉಪಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.
ಪಾಲಿಕೆಗೆ ಆಯ್ಕೆಯಾಗಿರುವ ಒಟ್ಟು 82 ಸದಸ್ಯರ ಪೈಕಿ 39 ಬಿಜೆಪಿ, 33 ಕಾಂಗ್ರೆಸ್, 6 ಪಕ್ಷೇತರರು, 3 ಎಐಎಂಐಎಂ ಹಾಗೂ ಒಬ್ಬರು ಜೆಡಿಎಸ್ ಸದಸ್ಯರಿದ್ದಾರೆ. ಪಾಲಿಕೆಯ ಅಧಿಕಾರದ ಚುಕ್ಕಾಣಿ ಹಿಡಿಯಲು ಮ್ಯಾಜಿಕ್ ಸಂಖ್ಯೆ 42 ಸದಸ್ಯರ ಬಲದ ಅಗತ್ಯವಿದೆ. ಪಕ್ಷೇತರರಾಗಿ ಗೆಲುವು ಪಡೆದ ಒಬ್ಬರು ಬಿಜೆಪಿ ಸೇರ್ಪಡೆಯಾಗಿದ್ದರಿಂದ ಈ ಪಕ್ಷದ ಬಲ 40ಕ್ಕೆ ಏರಿಕೆಯಾಗಿದೆ. ಸ್ಥಳೀಯ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ಬಲದಿಂದ ಬಿಜೆಪಿಗೆ ಅಧಿಕಾರದ ಗದ್ದುಗೆ ಏರುವ ಹಾದಿ ಬಹುತೇಕ ಸುಗಮವಾಗಿದೆ.
ಹೀಗಾಗಿ, ಬಿಜೆಪಿಯಿಂದ ಆಯ್ಕೆಯಾಗಿ ಮೇಯರ್ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸದಸ್ಯರು, ಮೇಯರ್ ಸ್ಥಾನಕ್ಕೆ ಪರಿಗಣಿಸಿ ಎಂದು ತಮ್ಮ ನಾಯಕರು ಹಾಗೂ ಪಕ್ಷದ ವರಿಷ್ಠರನ್ನು ಮನವೊಲಿಸುವಲ್ಲಿ ನಿರತರಾಗಿದ್ದಾರೆ. ಜೊತೆಗೆ, ತಮ್ಮ ಬೆಂಬಲಿಗರಿಂದಲೂ ನಾಯಕರ ದುಂಬಾಲು ಬಿದಿದ್ದಾರೆ. ಸತತ ಮೂರನೇ ಬಾರಿಗೆ ಪಾಲಿಕೆಯ ಚುಕ್ಕಾಣಿ ಹಿಡಿಯಲು ಬಿಜೆಪಿ ಮುಂದಾಗಿದೆ. ಈ ಬಾರಿ ಧಾರವಾಡದಿಂದ ಈರೇಶ ಅಂಚಟಗೇರಿ, ವಿಜಯಾನಂದ ಶೆಟ್ಟಿ ಹಾಗೂ ಮಾಜಿ ಮೇಯರ್ ಶಿವು ಹಿರೇಮಠ್ ಅವರ ಹೆಸರುಗಳು ಮೇಯರ್ ಹುದ್ದೆಗೆ ಪ್ರಮುಖವಾಗಿ ಕೇಳಿ ಬರುತ್ತಿವೆ.