ಹುಬ್ಬಳ್ಳಿ :ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ತಮ್ಮ ಸಂಪಾದನೆಯ ಎರಡು ಲಕ್ಷ ರೂ. ಖರ್ಚು ಮಾಡಿ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವ ಮೂಲಕ ಜನಮನ್ನಣೆ ಗಳಿಸಿದ್ದಾರೆ.
ಸ್ವಂತ ಹಣ ಖರ್ಚು ಮಾಡಿ, ಕುಡಿಯುವ ನೀರಿನ ಘಟಕ ಸ್ಥಾಪಿಸಿದ ಸರ್ಕಾರಿ ಶಾಲೆ ಶಿಕ್ಷಕ ಕಲಘಟಗಿ ತಾಲೂಕಿನ ರಾಮನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ರಾಮಕೃಷ್ಣ ಕಾಮತ್ ಅವರೇ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಲೆಗೆ ಕೊಡುಗೆಯಾಗಿ ನೀಡಿ ಮೆಚ್ಚುಗೆ ಪಡೆದಿದ್ದಾರೆ. ಇವರ ಕಾರ್ಯಕ್ಕೆ ಶಿಕ್ಷಣ ಇಲಾಖೆಯಿಂದಲೂ ಶ್ಲಾಘನೆ ವ್ಯಕ್ತವಾಗಿದೆ.
ಮೂಲತಃ ಬಂಟ್ವಾಳ ತಾಲೂಕಿನ ವಗ್ಗಾ ಗ್ರಾಮದ ಮಧ್ಯಮ ವರ್ಗದ ಕುಟುಂಬದವರಾದ ರಾಮಕೃಷ್ಣ, ತಮ್ಮ ತಂದೆ ದಿವಂಗತ ಮಾಧವ ಕಾಮತ್ ಅವರ ಜನ್ಮ ಶತಾಬ್ದಿ ನಿಮಿತ್ತ ತಮ್ಮ ಸಂಪಾದನೆಯ 2 ಲಕ್ಷ ರೂ. ಖರ್ಚು ಮಾಡಿ, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದಾರೆ. ಅದಕ್ಕೆ 10X15 ಅಳತೆಯ ಕಟ್ಟಡ ಸಹ ನಿರ್ಮಿಸಿದ್ದು, ಶುದ್ಧೀಕರಣ ಘಟಕದ ನಿರ್ಮಾಣಕ್ಕೆ ಇಟ್ಟಿಗೆ ನೀಡುವ ಮೂಲಕ ಗ್ರಾಮಸ್ಥರು ಕೂಡ ಸಹಕಾರ ನೀಡಿದ್ದಾರೆ.
15 ವರ್ಷಗಳ ಕಾಲ ಸೇವೆ ಮಾಡಿದ ಶಾಲೆಗೆ ಏನಾದರೂ ಕೊಡುಗೆ ನೀಡಬೇಕೆಂಬ ಕಾರಣಕ್ಕೆ ಕುಡಿಯುವ ನೀರಿನ ಶುದ್ಧೀಕರಣ ಘಟಕ ಸ್ಥಾಪಿಸಿರುವುದಾಗಿ ರಾಮಕೃಷ್ಣ ಹೇಳಿದ್ದಾರೆ.