ಕರ್ನಾಟಕ

karnataka

ಸಿಎಂ ಬದಲಾವಣೆ ಇಲ್ಲ, ಊಹಾಪೋಹಗಳಿಗೆ ಕಿವಿಗೊಡಬಾರದು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

By

Published : Dec 25, 2021, 12:27 PM IST

ಸಿಎಂ ಅವರು ಅಮೆರಿಕಾಗೆ ಹೋಗ್ತಾರೆ, ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಗುತ್ತಿದೆ ಎನ್ನುವುದು ಸುಳ್ಳು. ಸಿಎಂ ಬದಲಾವಣೆ ಬಗ್ಗೆ ವರಿಷ್ಠರ ಮಟ್ಟದಲ್ಲಿ ಯಾವುದೇ ಚರ್ಚೆಗಳು ನಡೆದಿಲ್ಲ. ಆ ರೀತಿಯ ಬೆಳವಣಿಗೆ ಇದ್ದಿದ್ರೆ ನನಗೆ ಗೊತ್ತಾಗುತ್ತಿತ್ತು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ.

Pralhad Joshi
ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ, ಊಹಾಪೋಹಗಳಿಗೆ ಕಿವಿಗೊಡಬಾರದು. ಸಿಎಂ ಬದಲಾವಣೆ ಸುದ್ದಿ ಹರಡುವುದು ತಪ್ಪು ಎಂದು ಕೇಂದ್ರ ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಅವರು ಅಮೆರಿಕಾಗೆ ಹೋಗ್ತಾರೆ, ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಗುತ್ತಿದೆ ಎನ್ನುವುದು ವದಂತಿ. ಸಿಎಂ ಬದಲಾವಣೆ ಬಗ್ಗೆ ವರಿಷ್ಠರ ಮಟ್ಟದಲ್ಲಿ ಯಾವುದೇ ಚರ್ಚೆಗಳು ನಡೆದಿಲ್ಲ. ಆ ರೀತಿಯ ಬೆಳವಣಿಗೆ ಇದ್ದಿದ್ರೆ ನನಗೆ ಗೊತ್ತಾಗುತ್ತಿತ್ತು. ಸುಮ್ಮನೆ ಊಹಾಪೋಹಗಳಿಗೆ ಕಿವಿಗೊಡಬಾರದೆಂದು ಮನವಿ ಮಾಡುತ್ತೇನೆ. ಯಾರು ಈ ರೀತಿ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೋ ಇದನ್ನು ಕೂಡಲೇ ಕೈಬಿಡಬೇಕು ಎಂದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ದಿ. ಅಟಲ್ ಬಿಹಾರಿ ವಾಜಪೇಯಿ ಜನ್ಮದಿನದ ಪ್ರಯುಕ್ತ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ರುದ್ರಭೂಮಿ ಸ್ವಚ್ಛತೆ ಕೈಗೆತ್ತಿಕೊಳ್ಳಲಾಗಿದೆ. ಶಾಶ್ವತವಾಗಿ ಸ್ವಚ್ಛಗೊಳಿಸಿ, ಸುಣ್ಣ-ಬಣ್ಣ ಬಳಿದು, ವಿದ್ಯುತ್ ದೀಪಗಳನ್ನು ಅಳವಡಿಸುವ ಕಾರ್ಯ ಮಾಡುತ್ತಿದ್ದೇವೆ. ರಾಷ್ಟ್ರೀಯ ಪಕ್ಷ, ರಾಷ್ಟ್ರೀಯ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬುದು ಪ್ರಧಾನಿ ಆಶಯ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಸೆಯಂತೆ ಸ್ವಚ್ಛತಾ ಕಾರ್ಯ ನಡೆಯುತ್ತಿದೆ ಎಂದು ಸಚಿವ ಜೋಶಿ ತಿಳಿಸಿದರು.

ಸಂಸತ್ ಸದನದಲ್ಲಿ ಪ್ರತಿಪಕ್ಷಗಳ ವರ್ತನೆಗೆ ವಿಷಾದ ವ್ಯಕ್ತಪಡಿಸಿದ ಅವರು, ಮೋದಿ ಏನು ಮಾಡಿದ್ರು ಕಾಂಗ್ರೆಸ್​ನವರು ವಿರೋಧ ಮಾಡುತ್ತಿದ್ದಾರೆ‌. ಮೋದಿ ಪೋಬಿಯಾ ಎನ್ನುವಂತೆ ಕಾಂಗ್ರೆಸ್​ನವರು ನಡೆದುಕೊಳ್ಳುತ್ತಿದ್ದಾರೆ. ಅಂಬೇಡ್ಕರ್ ಅವರ ಸಂವಿಧಾನವನ್ನು ಸಹ ಬಹಿಷ್ಕಾರ ಮಾಡಿದ್ರು. ಕಾಂಗ್ರೆಸ್ ಪಕ್ಷದವರು ಬಹಿಷ್ಕಾರ ಮಾಡಿ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಾರೆ ಎಂದರು.

ರಾಜ್ಯದಲ್ಲಿ ಮರಾಠಿಗರು, ಕನ್ನಡಗರು ಸುಮಧುರ ಬಾಂಧವ್ಯ ಹೊಂದಿದ್ದೇವೆ. ಸಮಾಜ ವಿರೋಧಿಗಳು, ಎಂಇಎಸ್ ನಾಯಕರು ಇಂತಹ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ರಾಜಕೀಯ ಸ್ವಾರ್ಥ ಅಡಗಿದೆ. ಮರಾಠಿಗರ ಹೆಸರಿನಲ್ಲಿ ಅನಗತ್ಯ ಗೊಂದಲ‌ ಸೃಷ್ಠಿಸಬೇಡಿ. ನಾವು ಒಂದಾಗಿರಬೇಕು. ದೇಶದಲ್ಲಿ ಒಂದಾಗಿ ನಡೆದುಕೊಂಡು ಹೋಗಬೇಕಾಗಿದೆ. ರಾಜಕೀಯ ಸ್ವಾರ್ಥಕ್ಕಾಗಿ ಜನರನ್ನ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕನ್ನಡ ಹಾಗೂ ಮರಾಠ ಮುಖಂಡರು ಒಂದಾಗಬೇಕು. ಮರಾಠಿಗರು ಸಹ ತುಂಬಾ ಚೆನ್ನಾಗಿ ಇಲ್ಲಿ ಕನ್ನಡ ಮಾತನಾಡುತ್ತಾರೆ. ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ ಎಂದು ಹೇಳಿದರು.

ಮಹಾರಾಷ್ಟ್ರ ಸರ್ಕಾರ ಹಾಗೂ ಎನ್​ಸಿಪಿ ವರಿಷ್ಠ ಶರದ್​ ಪವಾರ್​, ಸಿಎಂ ಉದ್ಧವ್ ಠಾಕ್ರೆ ಇದಕ್ಕೆ ಆಸ್ಪದ ಕೊಡಬಾರದು. ಕರ್ನಾಟಕ ಸರ್ಕಾರ ಕಟ್ಟುನಿಟ್ಟಿನ ಕ್ರಮ‌ ಕೈಗೊಂಡಿದೆ. ಎಂಇಎಸ್ ರಾಜಕೀಯ ಪಕ್ಷವಾಗಿದೆ. ಮಹಾರಾಷ್ಟ್ರದಲ್ಲಿನ ಕನ್ನಡಿಗರ ರಕ್ಷಣೆ ಅಲ್ಲಿನ ಸರ್ಕಾರದ ಹೊಣೆ. ದೇಶದ್ರೋಹಿಗಳನ್ನು ಕೂಡಲೇ ಬಂಧಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇನೆ ಎಂದರು.

ಬಂದ್ ಅಗತ್ಯತೆ ಇಲ್ಲ. ನಮ್ಮ ರಾಜ್ಯವನ್ನು ಬಂದ್ ಮಾಡಿ ನಾವು ನಷ್ಟ ಮಾಡಿಕೊಳ್ಳಬಾರದು. ಬಂದ್​ಗೆ ಕರೆ ಕೊಟ್ಟವರಿಗೆ ಮನವಿ ಮಾಡುತ್ತೇವೆ. ಜನರಿಗೆ ತೊಂದರೆ ಮಾಡಬೇಡಿ, ಎಂಇಎಸ್ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಉದ್ಧವ್ ಠಾಕ್ರೆಯವರು ಪ್ರಬುದ್ಧತೆಯಿಂದ ನಡೆದುಕೊಳ್ಳಬೇಕು. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ಜೋಶಿ ಒತ್ತಾಯಿಸಿದರು.

ABOUT THE AUTHOR

...view details