ಹುಬ್ಬಳ್ಳಿ: ಪೇಂಟಿಂಗ್ ಕೆಲಸದಿಂದ ಬಿಡಿಸಿದ್ದಕ್ಕೆ ಕೋಪಗೊಂಡು ಮಾಲೀಕನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದ ವ್ಯಕ್ತಿಗೆ ಇಲ್ಲಿಯ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ಹಾಗೂ 1,00,000 ರೂ. ದಂಡ ವಿಧಿಸಿದೆ.
ಕೆಲಸ ಬಿಡಿಸಿದ್ದಕ್ಕೆ ವ್ಯಕ್ತಿಗೆ ಚಾಕು ಇರಿತ: ಆರೋಪಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ
5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಚಾಕು ಇರಿದು ಕೊಲೆಗೆ ಯತ್ನಿಸಿದ್ದ ಆರೋಪಿಗೆ 7 ವರ್ಷ ಜೈಲು ಶಿಕ್ಷೆ ಹಾಗೂ 1,00,000 ರೂ. ದಂಡ ವಿಧಿಸಿದೆ.
ಗದಗ ರಸ್ತೆಯ ಚಾಲುಕ್ಯ ನಗರದ ಏಸಬ್ ಮುನಿಗೇಟ್ ಶಿಕ್ಷೆಗೆ ಒಳಗಾದ ವ್ಯಕ್ತಿ. ಬೃಂದಾವನ ಕಾಲನಿಯ ಶೇಖರಬಾಬು ಅಸಾದಿ ಬಳಿ ಏಸಬ್ ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ. ಸರಿಯಾಗಿ ಕೆಲಸ ಮಾಡುವುದಿಲ್ಲ ಎಂಬ ಕಾರಣಕ್ಕೆ ಏಸಬ್ನನ್ನು ಕೆಲಸದಿಂದ ತೆಗೆದು ಹಾಕಿದ್ದರು. ಇದೇ ದ್ವೇಷದ ಹಿನ್ನೆಲೆಯಲ್ಲಿ ಏಸಬ್ 2018ರ ಜನವರಿ 04 ರಂದು ರಾತ್ರಿ ಶೇಖರಬಾಬು ಸೊಂಟಕ್ಕೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದ. ಈ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎಸ್.ಗಂಗಾಧರ, 7 ವರ್ಷ ಜೈಲು ಶಿಕ್ಷೆ ಹಾಗೂ 1,00,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡದ ಮೊತ್ತದಲ್ಲಿ ಹಲ್ಲೆಗೆ ಒಳಗಾದವರಿಗೆ 85 ಸಾವಿರ ರೂ.ಪರಿಹಾರ, ಜಿಲ್ಲಾ ಕಾನೂನು ನೆರವು ಸಮಿತಿಗೆ 15 ಸಾವಿರ ಪಾವತಿಸುವಂತೆ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಸುಮಿತ್ರಾ ಅಂಚಟಗೇರಿ ವಾದ ಮಂಡಿಸಿದ್ದರು.
TAGGED:
murder case