ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಬಸವನಕೋಟೆ ಗ್ರಾಮದ ರೈತರು ಜೀವ ಭಯದಲ್ಲೇ ಜಮೀನುಗಳಿಗೆ ತೆರಳುವ ಸ್ಥಿತಿ ನಿರ್ಮಾಣವಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ಕಂಗಾಲಾಗಿದ್ದಾರೆ.
ಹೌದು, ಇಲ್ಲಿನ ಬಹುತೇಕ ರೈತರು ಬಾಳೆ ಸೇರಿದಂತೆ ಹಲವು ಬೆಳೆ ಬೆಳೆದು ಫಸಲಿನ ನೀರಿಕ್ಷೆಯಲ್ಲಿದ್ದಾರೆ. ಆದರೆ, ಬಾಳೆ ಬೆಳೆಗೆ ಕರಡಿ, ಹಂದಿ ಸೇರಿದಂತೆ ವನ್ಯಪ್ರಾಣಿಗಳು ದಾಳಿ ನಡೆಸುತ್ತಿದ್ದು, ಕಾಡುಪ್ರಾಣಿಗಳ ದಾಳಿಗೆ ರೈತರು ಬೇಸತ್ತಿದ್ದಾರೆ.
ಕಾಡು ಪ್ರಾಣಿಗಳ ಕಾಟಕ್ಕೆ ಬೇಸತ್ತ ರೈತರು ಬಸವನಕೋಟೆಯ ರೈತ ವಿಜಯ್ ಕುಮಾರ್ ಎನ್ನುವವರು ಏಳೆಂಟು ಲಕ್ಷ ರೂ. ಬಂಡವಾಳ ಹಾಕಿ, ಎರಡೂವರೆ ಎಕರೆ ಜಮೀನಿನಲ್ಲಿ ಬಾಳೆ ಬೆಳೆದಿದ್ದಾರೆ. ಆದರೆ, ಪೂರ್ತಿ ಬೆಳೆ ಕಾಡು ಪ್ರಾಣಿಗಳ ದಾಳಿಯಿಂದ ಹಾನಿಯಾಗಿದ್ದು, ನಷ್ಟ ಅನುಭವಿಸುವಂತಾಗಿದೆ. ಜೊತೆಗೆ ರಾತ್ರಿ ವೇಳೆ ಮೋಟಾರ್ ಆನ್ ಮಾಡಲು ಹಾಗೂ ನೀರು ಹಾಯಿಸಲು ಹೋದ ರೈತರ ಮೇಲೆ ಪ್ರಾಣಿಗಳು ದಾಳಿ ನಡೆಸುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ ಎಂದು ರೈತರು ತಿಳಿಸಿದ್ದಾರೆ.
ಈಗಾಗಲೇ 5-6 ರೈತರ ಮೇಲೆ ಕರಡಿಗಳು ದಾಳಿ ನಡೆಸಿವೆ. ರೈತರ ಮೇಲೆ ನಡೆದ ದಾಳಿ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಆದರೆ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ರೈತರಿಗೆ ರಕ್ಷಣೆ ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ.