ಕರ್ನಾಟಕ

karnataka

ETV Bharat / city

ವೈದ್ಯರೇ ಇಲ್ಲದ ದಾವಣಗೆರೆಯ ಆಸ್ಪತ್ರೆಗೀಗ ರಾಷ್ಟ್ರೀಯ ಪ್ರಶಸ್ತಿಯ ಗರಿ! - ರಾಷ್ಟ್ರಮಟ್ಟದ ಸ್ವಚ್ಛ ಮಹೋತ್ಸವ

ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯವು ಈ ಸಾಲಿನಿಂದ ನೀಡುತ್ತಿರುವ 'ರಾಷ್ಟ್ರಮಟ್ಟದ ಸ್ವಚ್ಚ ಮಹೋತ್ಸವ' ಪ್ರಶಸ್ತಿಯನ್ನು ದಾವಣಗೆರೆಯ ಚನ್ನಗಿರಿ ತಾಲೂಕಿನ ತಾವರಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರ ಪಡೆದುಕೊಂಂಡಿದೆ.

ತಾವರಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರ

By

Published : Sep 8, 2019, 12:30 PM IST

ದಾವಣಗೆರೆ: ಗ್ರಾಮೀಣ ಪ್ರದೇಶದ ಸರ್ಕಾರಿ ಆಸ್ಪತ್ರೆಗಳೆಂದರೆ ಮೂಗು ಮುರಿಯುವರೇ ಹೆಚ್ಚು. ಆದರೆ ಹತ್ತು ವರ್ಷಗಳ ಹಿಂದೆ ಯಾವೊಬ್ಬ ವೈದ್ಯ ಇಲ್ಲದ ಆಸ್ಪತ್ರೆ ಈಗ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದಲ್ಲದೇ, ಬಹುಮಾನವನ್ನೂ ಪಡೆದುಕೊಂಡಿದೆ.

ಇಂಥದ್ದೊಂದು ಹೆಗ್ಗಳಿಕೆಗೆ ಪಾತ್ರವಾಗಿರುವುದು ದಾವಣಗೆರೆಯಿಂದ 80 ಕಿಲೋಮೀಟರ್ ದೂರದಲ್ಲಿರುವ ಚನ್ನಗಿರಿ ತಾಲೂಕಿನ ತಾವರಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರ. ಈ ಕೇಂದ್ರ ಇಷ್ಟು ಪ್ರಖ್ಯಾತವಾಗಲು ಕಾರಣ ಈ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಎಸ್. ದೇವರಾಜ್.

ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯವು ಈ ಸಾಲಿನಿಂದ ಸ್ವಚ್ಚ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ (ಪಿಹೆಚ್​ಸಿ​) 'ರಾಷ್ಟ್ರಮಟ್ಟದ ಸ್ವಚ್ಚ ಮಹೋತ್ಸವ' ಎಂಬ ಹೆಸರಿನಲ್ಲಿ ಪ್ರಶಸ್ತಿ ಕೊಡಲು ಪ್ರಾರಂಭಿಸಿದೆ. ನೈರ್ಮಲ್ಯ ಹಾಗೂ ಗುಣಮಟ್ಟದ ಚಿಕಿತ್ಸೆಗೆ ಹೆಸರು ವಾಸಿಯಾಗಿರುವ ಚನ್ನಗಿರಿ ತಾಲೂಕಿನ ತಾವರೆಕೆರೆ ಹೆಲ್ತ್ ಸೆಂಟರ್​ಗೆ ಮೂರನೇ ಸ್ಥಾನ ಸಿಕ್ಕಿದೆ. ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿಯ ವೆಲ್ಲೂರು ಪಿಹೆಚ್​​ಸಿ ಪ್ರಥಮ ಸ್ಥಾನ ಪಡೆದರೆ, ಗುಜರಾತ್​ನ ಚಾಮನಗರದ ಜಾಮವಂತಲ್ಲಿಯ ಪಿಹೆಚ್​ಸಿ ಎರಡನೇ ಸ್ಥಾನ ಪಡೆದಿದೆ.

ತಾವರಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಎಸ್. ದೇವರಾಜ್

2010 ರಿಂದ 2015ರ ವರೆಗೆ ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಯಾವೊಬ್ಬ ವೈದ್ಯರೂ ಇರಲಿಲ್ಲ. ಗ್ರಾಮೀಣ ಪ್ರದೇಶವಾದ ಕಾರಣ ಇಲ್ಲಿಗೆ ಡಾಕ್ಟರ್ ಬರಲು ಹಿಂದೇಟು ಹಾಕುತ್ತಿದ್ದರು. ಈ ಐದು ವರ್ಷಗಳ ಅವಧಿಯಲ್ಲಿ ರೋಗಿಗಳು, ಈ ಭಾಗದ ಜನರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಈ ಕೇಂದ್ರದಲ್ಲಿ ಮೂವರು ವೈದ್ಯರು ಇರಬೇಕಾಗಿತ್ತಾದರೂ ಒಬ್ಬರೇ ಒಬ್ಬ ವೈದ್ಯರು ಇರಲಿಲ್ಲ. ಈ ಭಾಗದ ಜನರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಲಿಲ್ಲ. ಐದು ವರ್ಷಗಳ ಬಳಿಕ ಅಂದರೆ 2015 ರ ಡಿಸೆಂಬರ್​​ನಲ್ಲಿ ಇಲ್ಲಿನ ಜನರ ಪಾಲಿಗೆ ದೇವರಾಗಿ ಬಂದದ್ದು ಡಾ. ಎಸ್. ದೇವರಾಜ್. ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದೇವರಾಜ್ ಅವರನ್ನು ನಿಯೋಜಿಸಿದ ಬಳಿಕ ಜನರ ಪಾಲಿಗೆ ಆರೋಗ್ಯದ ಬಾಗಿಲು ತೆರೆದಂತಾಯ್ತು. ದಿನ ಕಳೆದಂತೆ ರೋಗಿಗಳ ಪಾಲಿಗೆ ದೇವರಾಜ್ ದೇವರಾಗಿಬಿಟ್ಟರು.

ಹ್ಯಾಟ್ರಿಕ್ ಕಾಯಕಲ್ಪ ಪ್ರಶಸ್ತಿ:

ಈ ಕೇಂದ್ರದಲ್ಲಿನ ಒಂದೊಂದೇ ಸಮಸ್ಯೆಗಳನ್ನು ಬಗೆಹರಿಸುತ್ತಾ ಬಂದ ಡಾ. ದೇವರಾಜ್, ಬಡವರ ಪಾಲಿನ ಆಪದ್ಭಾಂಧವರಾದರು. ಕೇಂದ್ರದ ಅಭಿವೃದ್ಧಿ, ಚಿಕಿತ್ಸೆ ಗುಣಮಟ್ಟದ ಜೊತೆಗೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದರು. ಇದರ ಫಲವಾಗಿ ಆರೋಗ್ಯ ಇಲಾಖೆ ನೀಡುವ ರಾಜ್ಯಮಟ್ಟದ ಕಾಯಕಲ್ಪ ಪ್ರಶಸ್ತಿಗೆ 2016 ರಿಂದ ಇಲ್ಲಿಯವರೆಗೆ ಸತತ ಮೂರು ಬಾರಿಗೆ ಈ ಕೇಂದ್ರ ಸಮಾಧಾನಕರ ಬಹುಮಾನ ಪಡೆದದ್ದು ಇದಕ್ಕೆ ನಿದರ್ಶನ. ಮಾತ್ರವಲ್ಲ, 2017 ರಿಂದ ಸತತವಾಗಿ ಮೂರು ವರ್ಷಗಳ ಕಾಲ ಈ ಪಿಹೆಚ್​​ಸಿ ಜಿಲ್ಲೆಯ ಕಾಯಕಲ್ಪ ಪ್ರಶಸ್ತಿ ತನ್ನ ಮುಡಿಗೇರಿಸಿಕೊಂಡಿದೆ.

ಸ್ವಚ್ಛ ಭಾರತ ಯೋಜನೆಯಡಿ ನೀಡಲಾಗುವ ಸ್ವಚ್ಛ ಮಹೋತ್ಸವ ರಾಷ್ಟ್ರೀಯ ಪ್ರಶಸ್ತಿಯನ್ನು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ತೃತೀಯ ಸ್ಥಾನಕ್ಕೆ ಆಯ್ಕೆಯಾಗಿರುವ ತಾವರಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ದೇವರಾಜ್ ಅವರು, ಕುಡಿಯುವ ನೀರು, ನೈರ್ಮಲ್ಯ ಹಾಗೂ ಜಲಶಕ್ತಿ ಇಲಾಖೆಯ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಂದ ಪ್ರಶಸ್ತಿಯ ಪ್ರಮಾಣ ಪತ್ರ ಸ್ವೀಕರಿಸಿದ್ದಾರೆ. ಒಟ್ಟಿನಲ್ಲಿ ಕುಗ್ರಾಮವಾದ ಆಸ್ಪತ್ರೆ ಈಗ ದೇಶದ ಗಮನ ಸೆಳೆದಿದ್ದು ನಿಜಕ್ಕೂ ಅಚ್ಚರಿಯೇ ಸರಿ.

ABOUT THE AUTHOR

...view details