ದಾವಣಗೆರೆ: ದೂಡಾ ಕಚೇರಿಯ ಪ್ರಾಧಿಕಾರದ ಸಭಾಂಗಣದಲ್ಲಿ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅಧ್ಯಕ್ಷತೆಯಲ್ಲಿ ದಾವಣಗೆರೆ ಸ್ಮಾರ್ಟ್ ಸಿಟಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಬಸವರಾಜ್, ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ತ್ವರಿತಗತಿಯಲ್ಲಿ ಸಾಗಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಶಂಕು ಸ್ಥಾಪನೆ ನೆರವೇರಿಸಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಿದ್ಧತೆ ನಡೆಸಬೇಕು. ಅಧಿಕಾರಿಗಳು ಯಾವುದೇ ಸಬೂಬು ಹೇಳಬಾರದು ಎಂದು ಸೂಚಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿಲ್ಲ. ಈ ಬಗ್ಗೆ ದೂರುಗಳಿವೆ. ಸರ್ಕಾರ ನಿಮಗೆ ಎಲ್ಲಾ ಸೌಲಭ್ಯ ನೀಡುತ್ತಿದೆ. ಆದರೂ ಅಧಿಕಾರಿಗಳು ಬೇಜಾವಾಬ್ದಾರಿಯಿಂದ ವರ್ತಿಸುವುದು ಸರಿಯಲ್ಲ. ಈ ಬಗ್ಗೆ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದ ಅವರು, ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿದರೆ ಜಿಲ್ಲೆ ಸ್ಮಾರ್ಟ್ ಸಿಟಿ ಹೇಗಾಗುತ್ತೆ ಎಂದು ಪ್ರಶ್ನಿಸಿದರು.
ಮುಂದಿನ ಬಾರಿ ನಾನು ಸಭೆ ನಡೆಸುವುದಿಲ್ಲ. ಬದಲಾಗಿ ನೇರವಾಗಿ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಜಿಲ್ಲೆಯ ಎಲ್ಲಾ ಶಾಸಕರೊಂದಿಗೆ ಗುತ್ತಿಗೆದಾರರ ಸಭೆ ನಡೆಸುತ್ತೇನೆ ಎಂದರು.
ಮೇಯರ್ ಅಜಯ ಕುಮಾರ್ ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಯಡಿಯ ಕಾಮಗಾರಿಗಳ ಉತ್ತಿಗೆದಾರರ ಬಗ್ಗೆ ನಿಗಾ ವಹಿಸಬೇಕು. ಅವರಿಗೆ ನೀಡಿದ ಟೆಂಡರ್ಗಳನ್ನು ಉಪ ಗುತ್ತಿಗೆದಾರರಿಗೆ ವಹಿಸಲಾಗುತ್ತಿದೆ. ಕಾಮಗಾರಿಗಳು ಕಳಪೆಯಾಗಲು ಅದೇ ಕಾರಣ ಎಂದು ದೂರಿದರು.
ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ಕಾಮಗಾರಿಗಳು ಕಳಪೆಯಿಂದ ಕೂಡಿದರೆ ಜನ ನಮ್ಮ ಬಗ್ಗೆ ತಪ್ಪು ತಿಳಿದುಕೊಳ್ಳುತ್ತಾರೆ. ಕಳಪೆ ಮಾಡುವುದು ಅವರು, ಕೆಟ್ಟ ಹೆಸರು ಬರುವುದು ಜಿಲ್ಲೆಯ ಜನಪ್ರತಿನಿಧಿಗಳಿಗೆ ಎಂದರು.
ಸ್ಮಾರ್ಟ್ ಸಿಟಿ ಎಂಡಿ ರವೀಂದ್ರ ಮಲ್ಲಾಪೂರ ಮಾತನಾಡಿ, ಯೋಜನೆಯಡಿ ಈಗಾಗಲೇ ಜಿಲ್ಲೆಯಲ್ಲಿ 16 ಕಾಮಗಾರಿಗಳು ಪೂರ್ಣಗೊಂಡಿವೆ. ಇದಕ್ಕೆ ₹ 29.44 ಕೋಟಿ ಹಣವಿದ್ದು, ₹ 23.05 ವೆಚ್ಚ ಮಾಡಲಾಗಿದೆ. ಇನ್ನುಳಿದಂತೆ 49 ಕಾಮಗಾರಿಗಳು ಪ್ರಗತಿಯಲ್ಲಿವೆ. ಅದಕ್ಕಾಗಿ ಅಂದಾಜು ₹ 678.86 ಕೋಟಿ ಹಣವಿದ್ದು, ₹ 114.69 ಕೋಟಿ ವೆಚ್ಚ ಮಾಡಲಾಗಿದೆ. ಟೆಂಡರ್ ಅಡಿಯಲ್ಲಿ 11 ಕಾಮಗಾರಿ ಹಾಗೂ ಡಿಪಿಆರ್ ಹಂತದಲ್ಲಿ 7 ಕಾಮಗಾರಿ ಇವೆ ಎಂದು ಸಭೆಗೆ ಮಾಹಿತಿ ನೀಡಿದರು.