ಕೋವಿಡ್ ನಿಭಾಯಿಸಲು ನೇಮಕವಾಗಿದ್ದ ಹಲವು ವೈದ್ಯರು ಕರ್ತವ್ಯಕ್ಕೆ ಹಾಜರಾಗಲು ಹಿಂದೇಟು: ಕಾರಣ ಏನು? - ಕರ್ತವ್ಯಕ್ಕೆ ಹಾಜರಾಗಲು ವೈದ್ಯರ ಹಿಂಜರಿಕೆ
ಮೂರನೇ ಅಲೆ ಅತಿ ಹೆಚ್ಚು ಮಕ್ಕಳಿಗೆ ಬಾಧಿಸಲಿದೆ ಎಂಬ ಆತಂಕ ಇದೆ. ಹೀಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮಕ್ಕಳ ತಜ್ಞ ವೈದ್ಯರನ್ನು ಸರ್ಕಾರ ನೇಮಕ ಮಾಡಿತ್ತು.
ಕೋವಿಡ್ ನಿಭಾಯಿಸಲು ನೇಮಕವಾಗಿದ್ದ ಹಲವು ವೈದ್ಯರು ಕರ್ತವ್ಯಕ್ಕೆ ಹಾಜರಾಗಲು ಹಿಂದೇಟು: ಕಾರಣ ಏನು?
By
Published : Aug 20, 2021, 2:07 AM IST
|
Updated : Aug 20, 2021, 3:17 PM IST
ಬೆಂಗಳೂರು:ಆರೋಗ್ಯ ಸಚಿವರು ಕೋವಿಡ್ ಅಲೆಯನ್ನು ನಿಭಾಯಿಸಲು ಹೆಚ್ಚುವರಿ ವೈದ್ಯರನ್ನು ನೇಮಕ ಮಾಡಲಾಗಿದೆ ಎಂದು ಪದೇ ಪದೆ ಹೇಳುತ್ತಿದ್ದು, ಆದರೆ, ವಾಸ್ತವದಲ್ಲಿ ನೇಮಕಾತಿಯಾದ ಬಹುತೇಕ ವೈದ್ಯರು ಕರ್ತವ್ಯಕ್ಕೆ ಹಾಜರಾಗೇ ಇಲ್ಲ ಎಂಬ ಮಾಹಿತಿ ಹೊರಬಿದ್ದಿದೆ.
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪದೇ ಪದೆ ಕೋವಿಡ್ ನಿರ್ವಹಣೆಗಾಗಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೆಚ್ಚುವರಿ ವೈದ್ಯರನ್ನು ನೇಮಕಾತಿ ಮಾಡಲಾಗಿದೆ. ಕೋವಿಡ್ ಮೂರನೇ ಅಲೆ ಎದುರಿಸಲು ನಾವು ಸನ್ನದ್ಧರಾಗಿದ್ದೇವೆ. ಹೆಚ್ಚುವರಿ ತಜ್ಞ ವೈದ್ಯರ ನೇಮಕಾತಿ ಮಾಡಲಾಗಿದ್ದು ಕೋವಿಡ್ ನಿಭಾಯಿಸಲು ಸಿದ್ಧರಾಗಿದ್ದೇವೆ ಎಂದು ಹೇಳ್ತಾನೇ ಬರುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಅಸಲಿ ಚಿತ್ರಣವೇ ಭಿನ್ನವಾಗಿದೆ.
ಸರ್ಕಾರ ಹೆಚ್ಚುವರಿ ವೈದ್ಯರನ್ನೇನೋ ನೇರ ನೇಮಕಾತಿ ಮಾಡಿದೆ. ಆದರೆ, ಕರ್ತವ್ಯಕ್ಕೆ ವರದಿ ಮಾಡಿದ ವೈದ್ಯರ ಸಂಖ್ಯೆ ಕಡಿಮೆ ಇದೆ. ನೇಮಕಾತಿಯಾದರೂ ಹಲವು ತಜ್ಞ ವೈದ್ಯರೂ ಇನ್ನೂ ಕರ್ತವ್ಯಕ್ಕೆ ಹಾಜರಾಗಿಲ್ಲ. ಜೂನ್ 16 ತಜ್ಞ ವೈದ್ಯರ ಹಾಜರಾತಿಗೆ ಕೊನೆ ದಿನವಾಗಿತ್ತು. ಅರ್ಧದಷ್ಟು ವೈದ್ಯರು ಕರ್ತವ್ಯಕ್ಕೆ ಹಾಜರಾಗೇ ಇಲ್ಲ. ಆ ಮೂಲಕ ವೈದ್ಯರು ಕರ್ತವ್ಯಕ್ಕೆ ವರದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ.
ಕರ್ತವ್ಯಕ್ಕೆ ಹಾಜರಾಗಲು ವೈದ್ಯರ ಹಿಂಜರಿಕೆ
ಕೋವಿಡ್ ಭೀತಿ ಮಧ್ಯೆ ಆರೋಗ್ಯ ಇಲಾಖೆ ಮೇ–ಜೂನ್ ತಿಂಗಳಲ್ಲಿ ತಾಲೂಕು ಮತ್ತು ಜಿಲ್ಲಾ ಸರ್ಕಾರಿ ಆಸ್ಪತ್ರೆಗಳು, ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿಗೆ 692 ತಜ್ಞ ವೈದ್ಯರನ್ನು ನೇರ ನೇಮಕಾತಿ ಮಾಡಿಕೊಂಡಿತ್ತು.
ಈ ವೈದ್ಯರಿಗೆ ಕರ್ತವ್ಯಕ್ಕೆ ಹಾಜರಾಗಲು ಜೂನ್ 16 ಕೊನೆಯ ದಿನ ಆಗಿತ್ತು. ಆದರೆ, ದುರಂತ ಅಂದರೆ ನೇಮಕಾತಿ ಆದೇಶ ಪಡೆದುಕೊಂಡವರ ಪೈಕಿ ಅರ್ಧಕ್ಕೂ ಹೆಚ್ಚು ವೈದ್ಯರು ಕರ್ತವ್ಯಕ್ಕೆ ವರದಿ ಮಾಡಿಕೊಂಡಿಲ್ಲ. 692 ತಜ್ಞ ವೈದ್ಯರ ಪೈಕಿ ಸುಮಾರು 364 ವೈದ್ಯರು ಇನ್ನೂ ಕರ್ತವ್ಯಕ್ಕೆ ಹಾಜರಾಗಿಲ್ಲ.
ಮಕ್ಕಳ ತಜ್ಞ ವೈದ್ಯರಿಂದಲೂ ನಿರಾಸಕ್ತಿ
ಮೂರನೇ ಅಲೆ ಅತಿ ಹೆಚ್ಚು ಮಕ್ಕಳಿಗೆ ಬಾಧಿಸಲಿದೆ ಎಂಬ ಆತಂಕ ಇದೆ. ಹೀಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮಕ್ಕಳ ತಜ್ಞ ವೈದ್ಯರನ್ನು ಸರ್ಕಾರ ನೇಮಕ ಮಾಡಿತ್ತು. ಸುಮಾರು 153 ಮಕ್ಕಳ ತಜ್ಞರನ್ನು ಆರೋಗ್ಯ ಇಲಾಖೆ ನೇಮಿಸಿಕೊಂಡಿತ್ತು. ಆದರೆ, ಈ ಪೈಕಿ ಈವರೆಗೆ ಕೆಲಸಕ್ಕೆ ವರದಿ ಮಾಡಿದ್ದು ಕೇವಲ 80 ವೈದ್ಯರು ಮಾತ್ರ.
ಅದೇ ರೀತಿ ಸ್ಥಳೀಯಮಟ್ಟದಲ್ಲಿ 1,048 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳನ್ನು ಕೂಡಾ ನೇಮಿಸಿ ಅಧಿಸೂಚನೆ ಹೊರಡಿಸಲಾಗಿತ್ತು. ಆ ಪೈಕಿ, 850 ವೈದ್ಯರು ಮಾತ್ರ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಕರ್ತವ್ಯಕ್ಕೆ ಹಾಜರಾಗಲು ಜೂನ್ 16 ಕೊನೆ ದಿನವಾಗಿತ್ತು. ಆದರೆ ಕೆಲ ವೈದ್ಯರು ಕೆಲಸಕ್ಕೆ ಸೇರ್ಪಡೆ ದಿನಾಂಕವನ್ನು ವಿಸ್ತರಿಸಿ, ಇನ್ನಷ್ಟು ಕಾಲಾವಕಾಶ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕೆಲಸಕ್ಕೆ ಸೇರಲು ಹಿಂದೇಟು ಏಕೆ?
ಮೆರಿಟ್ ಆಧಾರದಲ್ಲಿ ತಜ್ಞ ಮತ್ತು ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳನ್ನು ನೇಮಕಾತಿ ಮಾಡಲಾಗಿದೆ. ಆದರೆ ಆಯ್ಕೆಯಾದ ವೈದ್ಯರ ಸ್ಥಳ ನಿಯೋಜನೆ ಸಂಬಂಧ ಯಾವುದೇ ಕೌನ್ಸೆಲಿಂಗ್ ಮಾಡಿಲ್ಲ. ಹೀಗಾಗಿ ಆಯ್ಕೆಯಾದ ಬಹುತೇಕ ವೈದ್ಯರು ತಮಗೆ ಅನುಕೂಲ ಇರುವ ಸ್ಥಳಕ್ಕೆ ನೇಮಕ ಆಗಿಲ್ಲ ಎಂಬ ಕಾರಣಕ್ಕೆ ಕರ್ತವ್ಯಕ್ಕೆ ಹಾಜರಾಗಿಲ್ಲ ಎಂದು ಹೇಳಲಾಗಿದೆ.
ತಾವು ಬಯಸಿದ ಸ್ಥಳಗಳಿಗೆ ಕರ್ತವ್ಯಕ್ಕೆ ನಿಯೋಜನೆ ಮಾಡಿದ್ದರೆ, ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರು ಕೆಲಸಕ್ಕೆ ಹಾಜರಾಗುತ್ತಿದ್ದರು. ಆದರೆ, ಈ ಸಂಬಂಧ ಕೌನ್ಸೆಲಿಂಗ್ ಮಾಡದೇ ಇರುವ ಕಾರಣ ರಾಜ್ಯದ ವಿವಿಧೆಡೆಯ ಆಸ್ಪತ್ರೆಗಳಿಗೆ ನೇಮಕಗೊಂಡ ವೈದ್ಯರನ್ನು ನಿಯೋಜಿಸಲಾಗಿದೆ. ಕೌಟುಂಬಿಕ ಸಮಸ್ಯೆ, ವೈಯಕ್ತಿಕ ಸಮಸ್ಯೆ ಕಾರಣ ಹಲವರು ಕರ್ತವ್ಯಕ್ಕೆ ಹಾಜರಾಗಲು ಮನಸ್ಸು ತೋರಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೇಮಕಗೊಂಡ ವೈದ್ಯರು ಕೆಲಸಕ್ಕೆ ವರದಿ ಮಾಡದಿರಲು ಮತ್ತೊಂದು ದೊಡ್ಡ ಕಾರಣ ಆರೋಗ್ಯ ಇಲಾಖೆ ವಿಧಿಸಿರುವ ಆರು ತಿಂಗಳ ಕಡ್ಡಾಯ ಕರ್ತವ್ಯ ಷರತ್ತು. ಹುದ್ದೆಗೆ ಸೇರಿದ ಆರು ತಿಂಗಳ ಕಾಲ ಕಡ್ಡಾಯವಾಗಿ ವೈದ್ಯರು ಕೆಲಸ ಮಾಡಬೇಕು. ಅದಕ್ಕೂ ಮೊದಲೇ ಹುದ್ದೆ ತ್ಯಜಿಸಿದರೆ ದಂಡ ವಿಧಿಸುವ ಕಠಿಣ ನಿಯಮವನ್ನೂ ಹೇರಿದೆ. ತಜ್ಞ ವೈದ್ಯರು ಆರು ತಿಂಗಳು ಕೆಲಸ ಬಿಟ್ಟರೆ 10 ಲಕ್ಷ ರೂ., ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳಿಗೆ 5 ಲಕ್ಷ ರೂ. ದಂಡ ಕಟ್ಟುವಂತೆ ಷರತ್ತು ವಿಧಿಸಿದೆ. ಈ ಷರತ್ತಿನಿಂದ ಕೆಲ ವೈದ್ಯರು ಕರ್ತವ್ಯಕ್ಕೆ ಹಾಜರಾಗದಿರಲು ನಿರಾಸಕ್ತಿ ತೋರುತ್ತಿದ್ದಾರೆ ಎನ್ನಲಾಗಿದೆ.