ದಾವಣಗೆರೆ: ಪ್ರೀತಿಸುತ್ತಿದ್ದ ಯುವಕನ ಮೇಲೆ ಪ್ರಿಯತಮೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿರುವ ಘಟನೆ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಸಮೀಪದ ವಡ್ಡಿನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪರಸಪ್ಪ ಎಂಬಾತ ಗಂಭೀರವಾಗಿ ಗಾಯಗೊಂಡ ಯುವಕ. ಅದೇ ಗ್ರಾಮದ ಆತನ ಪ್ರೇಯಸಿ ಬೆಂಕಿ ಹಚ್ಚಿದ್ದಾಳೆ. ಯುವಕ ಗಾಯಗೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಘಟನೆಯ ಹಿನ್ನೆಲೆ...?
ಮನೆಗೆ ಬಂದ ಯುವಕನಿಗೆ ಬೆಂಕಿ ಹಚ್ಚಿದ ಪ್ರೇಯಸಿ . ವಡ್ಡಿನಹಳ್ಳಿ ಗ್ರಾಮದ ಪರಸಪ್ಪ ಹಾಗೂ ಅದೇ ಗ್ರಾಮದ ಯುವತಿ ಬೇರೆ ಬೇರೆ ಜಾತಿಯವರಾಗಿದ್ದು, ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗಷ್ಟೇ ಯುವತಿಗೆ ಬೇರೊಬ್ಬ ಯುವಕನ ಜೊತೆ ನಿಶ್ಚಿತಾರ್ಥ ನಡೆದಿತ್ತು.
ಇದರಿಂದ ಸಿಟ್ಟಿಗೆದ್ದ ಪರಸಪ್ಪ, ಯುವತಿಯ ಮನೆಗೆ ತೆರಳಿದ್ದ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದು ವಿಕೋಪಕ್ಕೆ ತಿರುಗಿದಾಗ ಆಕ್ರೋಶಗೊಂಡ ಯುವತಿಯು ಪರಸಪ್ಪನ ಮೇಲೆ ಸೀಮೆಎಣ್ಣೆ ಎರಚಿ ಬೆಂಕಿ ಹಚ್ಚಿದ್ದಾಳೆ. ಇದರಿಂದ ತಪ್ಪಿಸಿಕೊಳ್ಳಲು ಯುವಕ ಬಣವೆಗೆ ಮೈ ಉಜ್ಜಿದ್ದಾನೆ. ಬಳಿಕ ಅದೇ ಬೆಂಕಿ ಹುಲ್ಲಿನ ಬಣವೆಗೂ ತಾಗಿದ್ದರಿಂದ ಬಣವೆಯೂ ಸುಟ್ಟು ಹೋಗಿದೆ.
ಈ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಯುವಕನನ್ನು ರಕ್ಷಿಸಿದ್ದಾರೆ. ಮೈತುಂಬಾ ಸುಟ್ಟ ಗಾಯದಿಂದ ಅಸ್ವಸ್ಥಗೊಂಡಿದ್ದ ಪರಸಪ್ಪನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಅರಸೀಕೆರೆ ಪೊಲೀಸರು ಬೆಂಕಿ ಹಚ್ಚಿದ ಯುವತಿಯ ಪತ್ತೆಗೆ ಬಲೆ ಬೀಸಿದ್ದಾರೆ.