ದಾವಣಗೆರೆ: ಆಧುನಿಕ ಜಗತ್ತಿನಲ್ಲಿ ಹಳೆಯ ಆಚಾರ ವಿಚಾರಗಳು ಇಂದಿಗೂ ಕೂಡ ಚಾಲ್ತಿಯಲ್ಲಿವೆ. ಗೊರವಯ್ಯ ಕಬ್ಬಿಣದ ಸರಪಳಿ ತುಂಡು ಮಾಡಿ, ಕೈಕಾಲಿಗೆ ಸಲಾಕೆ ಚುಚ್ಚಿಕೊಳ್ಳುವ ಪದ್ಧತಿ ಜಿಲ್ಲೆಯ ಗ್ರಾಮವೊಂದರಲ್ಲಿ ಇಂದಿಗೂ ಚಾಲ್ತಿಯಲ್ಲಿದ್ದು, ಇದು ಮೈಲಾರಲಿಂಗೇಶ್ವರನ ಪವಾಡ ಎಂಬ ನಂಬಿಕೆ ಭಕ್ತರಲ್ಲಿ ಮನೆ ಮಾಡಿದೆ.
ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಗೊರವಯ್ಯನ ಶಸ್ತ್ರ ಪವಾಡ ಜಿಲ್ಲೆಯ ಹರಿಹರ ತಾಲೂಕಿನ ದೇವರಬೆಳಕೆರೆ ಗ್ರಾಮದ ದೇವಲೋಕದ ಕಾರುಣ್ಯ ಪುರುಷ ಮೈಲಾರಲಿಂಗ ಇಲ್ಲಿ ಉದ್ಭವಿಸಿದ್ದರಿಂದ ಪವಾಡಗಳು ಜರುಗುತ್ತವೆ. ಪವಾಡ ಪುರುಷ ಮೈಲಾರಲಿಂಗೇಶ್ವರ ನೆಲೆಸಿದ್ದರಿಂದ ಈ ಗ್ರಾಮಕ್ಕೆ ದೇವರ ಬೆಳಕೆರೆ ಎಂಬ ಹೆಸರು ಬಂದಿದೆಯಂತೆ. ಪ್ರತಿವರ್ಷ ಭರತ ಹುಣ್ಣಿಮೆಯ ಬಳಿಕ ಈ ಗ್ರಾಮದಲ್ಲಿ ಮೈಲಾರ ಜಾತ್ರೆ ನೆರವೇರಿಸಲಾಗುತ್ತದೆ. ಜಾತ್ರೆಯ ಎರಡನೇ ದಿನ ನಡೆಯುವ ಶಸ್ತ್ರ ಪವಾಡವನ್ನು ನೋಡಲು ಸುತ್ತಮುತ್ತಲಿನ ಊರುಗಳಿಂದ ಹಾಗು ರಾಜ್ಯದ ಸಾವಿರಾರು ಜನರು ಈ ಪುಣ್ಯ ಸ್ಥಳಕ್ಕೆ ಭೇಟಿ ನೀಡುತ್ತಾರೆ.
ಶಸ್ತ್ರ ಪವಾಡ:
11 ದಿನಗಳ ಕಾಲ ಉಪವಾಸವವಿರುವ ಗೊರವಯ್ಯ ಜಾತ್ರೆಯಲ್ಲಿ ಹಲವು ಪವಾಡಗಳನ್ನು ಮಾಡುತ್ತಾರೆ. ಹಿಂದಿನ ಕಾಲದಲ್ಲಿ ಗೊರವಯ್ಯನವರ ಪೂರ್ವಜರು ಶಿರವನ್ನು ಕತ್ತರಿಸಿ ಬಾಳೆ ಎಲೆ ಮೇಲೆ ಇಟ್ಟು ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಪವಾಡ ಮಾಡುತ್ತಿದ್ದರಂತೆ. ಈಗ ಕೈ ಮತ್ತು ಕಾಲುಗಳಿಗೆ ಶಸ್ತ್ರ ಚುಚ್ಚಿಕೊಳ್ಳುವ ಮೂಲಕ ಮೈಲಾರ ಜಾತ್ರೆಯಲ್ಲಿ ಪವಾಡ ಮಾಡಿದ್ರು ಕೂಡ ರಕ್ತ ಬರುವುದಾಗಲಿ ಹಾಗು ಯಾವುದೇ ಆಸ್ಪತ್ರೆಗಳಿಗೆ ಗೊರವಯ್ಯ ಹೋಗುವುದಿಲ್ಲ. ಕೇವಲ ಭಂಡಾರದಿಂದ ಗಾಯವನ್ನು ವಾಸಿಮಾಡಿಕೊಳ್ಳುತ್ತಿರುವುದು ವಿಶೇಷ.
ಸತತ ಮೂರು ದಿನಗಳ ಕಾಲ ಜರುಗುವ ಈ ಮೈಲಾರಲಿಂಗೇಶ್ವರ ಜಾತ್ರೆಗೆ ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಶಿವಮೊಗ್ಗ, ಹಾವೇರಿ, ಬೆಂಗಳೂರು ಜಿಲ್ಲೆಗಳ ಸಾವಿರಾರು ಭಕ್ತರು ಆಗಮಿಸುತ್ತಾರೆ. ಮೊದಲ ದಿನ ರಥೋತ್ಸವ ಜರುಗಲಿದ್ದು, ಎರಡನೇ ದಿನ ಗೊರವಯ್ಯರ ಶಸ್ತ್ರ ಪವಾಡ ನಡೆಯುತ್ತದೆ. ಈ ಜಾತ್ರೆಗೆ ಆಗಮಿಸಿ ಯಾವುದೇ ಹರಕೆ ಹೊತ್ತರೂ ಮರು ಜಾತ್ರೆಯ ವೇಳೆಗೆ ಇಷ್ಟಾರ್ಥ ಸಿದ್ಧಿಯಾಗಿರುತ್ತದೆ ಎಂಬುದು ಇಲ್ಲಿನ ಭಕ್ತರ ನಂಬಿಕೆ. ಅಲ್ಲದೆ ಪ್ರತಿ ವರ್ಷ ಭರತ ಹುಣ್ಣಿಮೆಯಾದ ನಂತರ ಈ ಜಾತ್ರೆ ನಡೆಯುತ್ತದೆ.