ದಾವಣಗೆರೆ: ಕ್ಯಾನ್ಸರ್ ರೋಗವು ಜ್ವಲಂತ ಸಮಸ್ಯೆಯಾಗಿ ಭಾರತ ದೇಶವನ್ನು ಕಾಡುತ್ತಿದ್ದು, 2016ರಲ್ಲಿ ಸುಮಾರು 16 ಲಕ್ಷ ಜನರು ಇದಕ್ಕೆ ತುತ್ತಾಗಿದ್ದಾರೆ. ಈ ಬೃಹತ್ ಸಂಖ್ಯೆಯ ರೋಗಿಗಳ ಆರೈಕೆಗೆ ಸುಸಜ್ಜಿತ ಆಸ್ಪತ್ರೆಗಳು ಅವಶ್ಯಕವಾಗಿದ್ದು, ಈಗ ಜಿಲ್ಲೆಯ ಕ್ಯಾನ್ಸರ್ ಹಾಸ್ಪಿಟಲ್ಗೆ ಚಾಲನೆ ದೊರೆತಿದೆ.
ರಾಜ್ಯದ ಮಧ್ಯ ಭಾಗದಲ್ಲಿರುವ ದಾವಣಗೆರೆಯಲ್ಲಿ ಎನ್ಹೆಚ್ 4ರ ಸಮೀಪ ಕ್ಯಾನ್ಸರ್ ಆಸ್ಪತ್ರೆಯೊಂದು ಸುಸಜ್ಜಿತವಾಗಿ ನಿರ್ಮಾಣ ಆಗಿದೆ. ಬಾಪೂಜಿ ವಿದ್ಯಾ ಸಂಸ್ಥೆ ಮತ್ತು ಬಾಪೂಜಿ ಕ್ಯಾನ್ಸರ್ ಹಾಸ್ಪಿಟಲ್ ಟ್ರಸ್ಟ್ ವತಿಯಿಂದ ವಿಶ್ವರಾಧ್ಯ ಕ್ಯಾನ್ಸರ್ ಹಾಸ್ಪಿಟಲ್ ಮತ್ತು ರಿಸರ್ಚ್ ಇನ್ಸ್ಟಿಟ್ಯೂಟ್ಗೆ ಚಾಲನೆ ಸಿಕ್ಕಿದ್ದು, ಇದು ಜೆಜೆಎಂ ಮತ್ತು ಎಸ್ಎಸ್ಐಎಂಎಸ್ ಮೆಡಿಕಲ್ ಕಾಲೇಜುಗಳ ಸಹಯೋಗದಲ್ಲಿ ಆಸ್ಪತ್ರೆ ಕಾರ್ಯಪ್ರವೃತವಾಗಿದೆ.
200 ಕಿ.ಮೀ. ಹೋಗಿ ಚಿಕಿತ್ಸೆ ಪಡೆಯಬೇಕಿತ್ತು:
ಇಲ್ಲಿಯವರೆಗೂ ದಾವಣಗೆರೆ ಸುತ್ತಮುತ್ತಲಿನ ಕ್ಯಾನ್ಸರ್ ರೋಗಿಗಳು ಸುಮಾರು 200 ಕಿ.ಮೀ. ಹೆಚ್ಚು ಕ್ರಮಿಸಿ ಚಿಕಿತ್ಸೆ ಪಡೆಯಬೇಕಿತ್ತು. ಕ್ಯಾನ್ಸರ್ ರೋಗದ ಚಿಕಿತ್ಸೆಗೆ ಬಹಳ ಸಮಯ ಬೇಕಾಗುವುದರಿಂದ ರೋಗಿಯ ಕುಟುಂಬದವರು ದೂರದ ಊರುಗಳಿಗೆ ಪ್ರಯಾಣ ಮಾಡಿ ತೊಂದರೆ ಅನುಭವಿಸುತ್ತಿದ್ದರು. ಈ ನಿಟ್ಟಿನಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಬಾಪೂಜಿ ಕ್ಯಾನ್ಸರ್ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಪರಿಪೂರ್ಣ ರೀತಿಯಲ್ಲಿ ಚಿಕಿತ್ಸೆ ನೀಡಬೇಕು ಎಂಬ ಉದ್ದೇಶ ಈಡೇರಿದ್ದು, ಈಗ ಕ್ಯಾನ್ಸರ್ ಆಸ್ಪತ್ರೆಗೆ ಚಾಲನೆ ಸಿಕ್ಕಿದೆ.
ಕ್ಯಾನ್ಸರ್ ಆಸ್ಪತ್ರೆಗೆ ಚಾಲನೆ ಈ ಆಸ್ಪತ್ರೆಯಲ್ಲಿ ಸುಮಾರು 100 ರಿಂದ 130 ರೋಗಿಗಳ ಆರೈಕೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಬಿಪಿಎಲ್ ಕಾರ್ಡ್ ಹಾಗೂ ಆರೋಗ್ಯ ಕರ್ನಾಟಕ ಸ್ಕೀಂ ಇದ್ದರೆ ಉಚಿತ ಚಿಕಿತ್ಸೆ ಕೊಡಲು ಆಡಳಿತ ಮಂಡಳಿ ಮುಂದಾಗಿರುವುದು ಶ್ಲಾಘನೀಯ.
ಲಭ್ಯವಿರುವ ಸೇವೆಗಳು:
ತಲೆ, ಬಾಯಿ, ಕುತ್ತಿಗೆ, ಗರ್ಭಕೋಶ, ಅನ್ನನಾಳ, ಉದರ, ಮೆದುಳು, ಎಲುಬಿನ ಕ್ಯಾನ್ಸರ್ ಸೇರಿದಂತೆ ಇನ್ನಿತರೆ ಎಲ್ಲಾ ಕ್ಯಾನ್ಸರ್ಗೂ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ ಧ್ವನಿ ಪೆಟ್ಟಿಗೆ ಕ್ಯಾನ್ಸರ್ಗೆ ಅತ್ಯಾಧುನಿಕವಾದ ಲೇಸರ್ ಚಿಕಿತ್ಸೆ ಕೊಡಲಾಗುತ್ತಿದೆ.