ಬೆಂಗಳೂರು :ರೂಪಾಂತರಿ ಕೋವಿಡ್ ಸೋಂಕಿನ ತೀವ್ರತೆ ಕಡಿಮೆ ಆಯ್ತು ಎನ್ನುವಾಗಲೇ ಮತ್ತೊಂದು ಹೊಸ ರೂಪಾಂತರಿ XE ಭೀತಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಆರೋಗ್ಯಸೌಧದಲ್ಲಿ ತಾಂತ್ರಿಕ ಸಲಹಾ ಸಮಿತಿ ನೇತೃತ್ವದಲ್ಲಿ ಆರೋಗ್ಯ ಸಚಿವ ಸುಧಾಕರ್ ತುರ್ತು ಸಭೆ ನಡೆಸಿದರು.
ಸಭೆ ಬಳಿಕ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್, 8 ದೇಶಗಳಲ್ಲಿ ನಾಲ್ಕನೇ ಅಲೆ ಹೆಚ್ಚಾಗಿದೆ. XE ಹಾಗೂ ME ಎಂಬ ಹೊಸ ಪ್ರಬೇಧ ಹೆಚ್ಚಾಗಿದೆ. ನಮ್ಮ ದೇಶದಲ್ಲಿ ಹರಿಯಾಣ, ದೆಹಲಿಯಲ್ಲಿ ಕಳೆದ ಮೂರು ದಿನಗಳಲ್ಲಿ ಸೋಂಕು ಹೆಚ್ಚಾಗಿದೆ. ಹೀಗಾಗಿ, ತುರ್ತು ಸಭೆ ಮಾಡಿ ಸಮಾಲೋಚನೆ ಮಾಡಲಾಗಿದೆ. ತಾಂತ್ರಿಕ ಸಲಹಾ ಸಮಿತಿ ನೀಡಿರುವ ಸಲಹೆಯಂತೆ ಸೋಂಕು ಹೆಚ್ಚಿರುವ ದೇಶಗಳಿಂದ ಬರುವವರ ಮೇಲೆ ನಿಗಾ ವಹಿಸಲು ಅಭಿಪ್ರಾಯ ವ್ಯಕ್ತವಾಗಿದೆ ಎಂದರು.
ಏರ್ಪೋರ್ಟ್ಗೆ ಬಂದ ಬಳಿಕ ಅವರಿಗೆ ಟೆಸ್ಟ್ ಮಾಡಿ, ಮನೆಗೆ ಹೋದ ಬಳಿಕ ಟೆಲಿ ಮಾನಿಟರಿಂಗ್ ಮಾಡಲು ತೀರ್ಮಾನ ಮಾಡಲಾಗಿದೆ. IIT ಕಾನ್ಪುರ್ ರಿಪೋರ್ಟ್ ಪ್ರಕಾರ ಜೂನ್-ಜುಲೈನಲ್ಲಿ ನಾಲ್ಕನೇ ಅಲೆ ಬರುತ್ತೆ ಎಂದು ಹೇಳಿದ್ದಾರೆ. ಜನ ಮಾಸ್ಕ್ ಹಾಕೋದನ್ನೇ ಮರೆತಿದ್ದಾರೆ. ಹೀಗಾಗಿ, ಮಾಸ್ಕ್ ಬಳಕೆ ಮಾಡೋದು ಮುಂದುವರೆಸಿ. ಬೂಸ್ಟರ್ ಡೋಸ್ ಪಡೆಯುವ ಬಗ್ಗೆ ಜನರಲ್ಲಿ ನಿರ್ಲಕ್ಷ್ಯ ಕಂಡು ಬಂದಿದೆ. ಸೋಂಕು ಹೆಚ್ಚಳ ಆಗಿ ನಂತರ ವ್ಯಾಕ್ಸಿನೇಷನ್ಗೆ ಮುಗಿಬೀಳಬೇಡಿ. ಈಗಲೇ ನಿಮ್ಮ ಅವಧಿ ಬಂದಾಗ ಬೂಸ್ಟರ್ ಡೋಸ್ ಪಡೆಯಿರಿ ಅಂತಾ ಮನವಿ ಮಾಡಿದರು.
ಯಾವ್ಯಾವ ದೇಶಗಳಲ್ಲಿ ಹೆಚ್ಚಳ? :ದಕ್ಷಿಣ ಕೋರಿಯಾ, ಹಾಂಕಾಂಗ್, ಚೀನಾ ಈ ಮೂರು ದೇಶಗಳಲ್ಲಿ ವೈರಸ್ ಹೆಚ್ಚಿದೆ. ಉಳಿದಂತೆ ಯುಕೆ, ಕೋರಿಯಾ, ಜರ್ಮನಿ ಸೇರಿದಂತೆ ಎಂಟು ದೇಶಗಳಿಂದ ಬರುವವರಿಗೆ ಮಾರ್ಗಸೂಚಿ ಹೊರಡಿಸುತ್ತೇವೆ. ಸದ್ಯ ರೋಗದ ತೀವ್ರತೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು, ಆಯಾ ದೇಶಗಳ ವರದಿ ಕೊಡುವಂತೆ ಕಮಿಟಿಗೆ ಹೇಳಲಾಗಿದೆ. ಆದರೆ, ತಜ್ಞರು ಸ್ಪಷ್ಟವಾಗಿ ಹೇಳಿದ್ದು, ತಡಮಾಡದೇ ಲಸಿಕೆ ಹಾಕಿಸಿಕೊಳ್ಳುವಂತೆ ಎಚ್ಚರಿಸಿದ್ದಾರೆ ಎಂದು ಸಚಿವರು ವಿವರಿಸಿದರು.