ಬೆಂಗಳೂರು :ರಾಜಧಾನಿಯಲ್ಲಿ ಮನೆ ಬಾಡಿಗೆ ನೀಡುವ ಮುನ್ನ ಮಾಲೀಕರು ಯೋಚಿಸಲೇಬೇಕಾದ ಸ್ಟೋರಿ ಇದು. ಬಾಡಿಗೆ ಪಡೆಯುವಾಗ ನಯವಾಗಿ ಮಾಲೀಕರೊಂದಿಗೆ ಮಾತನಾಡಿ ಅನಂತರ ಬಾಡಿಗೆ ಕೇಳಲು ಹೋದ ಮಾಲೀಕನ ಮೇಲೆಯೇ ಅತ್ಯಾಚಾರ ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದ ಮಹಿಳೆ ಸೇರಿದಂತೆ ಇಬ್ಬರನ್ನು ಹೆಚ್ಎಎಲ್ ಪೊಲೀಸರು ಬಂಧಿಸಿದ್ದಾರೆ.
ಕುಂದಲಹಳ್ಳಿ ನಿವಾಸಿ ಮನೆ ಮಾಲೀಕ ವೆಂಕಟರೆಡ್ಡಿ ನೀಡಿದ ದೂರಿನ ಮೇರೆಗೆ ಭುವನಾ ಹಾಗೂ ವಿಶಾಲ್ ಎಂಬುವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ರಾಜಸ್ಥಾನ ಮೂಲದ ಭುವನಾ ಎಂಬಾಕೆ ಕಳೆದ ಎಂಟು ವರ್ಷಗಳ ಹಿಂದೆ ಮಾರತ್ಹಳ್ಳಿಯಲ್ಲಿ ವೆಂಕಟರೆಡ್ಡಿ ಸೇರಿದ ಮನೆಯನ್ನು ಪೇಯಿಂಗ್ ಗೆಸ್ಟ್ (ಪಿಜಿ) ನಡೆಸುವುದಾಗಿ ತಿಂಗಳಿಗೆ 6 ಲಕ್ಷ ರೂಪಾಯಿ ನೀಡುವುದಾಗಿ ಹೇಳಿ ಬಾಡಿಗೆ ಪಡೆದಿದ್ದಳು.
ಪಿಜಿಯಲ್ಲಿ ಸುಮಾರು 300 ಜನರು ವಾಸವಾಗಿದ್ದರು. ಪ್ರಾರಂಭದಲ್ಲಿ ಬಾಡಿಗೆ ನೀಡುತ್ತಿದ್ದ ಭುವನಾ ನಂತರ ಸ್ನೇಹಿತ ವಿಶಾಲ್ ಜೊತೆಗೂಡಿ ಬಾಡಿಗೆ ಕೊಡದೆ ಮಾಲೀಕರಿಗೆ ಸತಾಯಿಸಿದ್ದಾರೆ. ಬಾಡಿಗೆ ಪಡೆದಾಗಿನಿಂದ ಈವರೆಗೂ ವಿದ್ಯುತ್, ವಾಟರ್ ಬಿಲ್ ಯಾವುದೂ ಕಟ್ಟಿಲ್ಲ. 2019ರ ಡಿಸೆಂಬರ್ನಿಂದ 2021ರ ಫೆಬ್ರವರಿವರೆಗೆ ಸುಮಾರು ಒಂದೂವರೆ ಕೋಟಿ ಬಾಡಿಗೆ ಹಣ ನೀಡಿಲ್ಲ.