ಕರ್ನಾಟಕ

karnataka

ETV Bharat / city

12 ಆಸ್ಪತ್ರೆಗಳ ಕದ ತಟ್ಟಿದರು ಸಿಗದ ಚಿಕಿತ್ಸೆ ಮಹಿಳೆ ಸಾವು: ಶವದ ಮೇಲಿನ ಮಾಂಗಲ್ಯ ಕದ್ದರೆಂದು ಪತಿ ಆರೋಪ - ಕೊರೊನಾ ಪರಿಣಾಮ

ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಹರಸಾಹಸ ಪಟ್ಟರೂ ಯಾರೂ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ತಪಾಸಣಾ ವರದಿ ಇಲ್ಲದ ಕಾರಣಕ್ಕಾಗಿ ಸೇರಿಸಿಕೊಂಡಿಲ್ಲ ಎಂದು ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.

woman-dies-without-treatment-in-bangalore
ರಾಜಧಾನಿ ಹಂತಕ ಆಸ್ಪತ್ರೆಗಳ ಹಣದಾಸೆಗೆ ಮತ್ತೊಂದು ಬಲಿ

By

Published : Jul 5, 2020, 1:56 AM IST

ಬೆಂಗಳೂರು : ಕೊರೊನಾ ಭೀತಿಯ ನಡುವೆ ವೈದ್ಯಾಧಿಕಾರಿಗಳ ಆಲಸ್ಯ, ಬೇಜಾವಾಬ್ದಾರಿ ಹೇಳಿಕೆಯಿಂದ ಸರಿಯಾದ ಚಿಕಿತ್ಸೆ ಸಿಗದೆ ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ.

ಬನ್ನಿಪೇಟೆ ನಿವಾಸಿ ವಂಸತಾ (50) ಎಂಬ ಮಹಿಳೆ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು. ನಿನ್ನೆ ತೀವ್ರ ಉಸಿರಾಟ ತೊಂದರೆ ಉಲ್ಬಣವಾದ ಕಾರಣ ವಸಂತಾ ಪತ್ನಿ ಬಾಬು, ಚಿಕಿತ್ಸೆಗಾಗಿ 13 ಆಸ್ಪತ್ರೆಗಳನ್ನು ಸುತ್ತಾಡಿದರು. ಆ ಆಸ್ಪತ್ರೆಗಳ ವೈದ್ಯರ ನಿರ್ಲಕ್ಷದಿಂದ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾರೆ ಎಂದು ವಂಸತಾ ಪತಿ ಆರೋಪಿಸಿದ್ದಾರೆ.

ಆಸ್ಪತ್ರೆಗಳಿಂದ ಆಸ್ಪತ್ರೆಗೆ ಅಲೆದಾಟಮೊದಲು ಮಾರ್ಥಾಸ್​ ಆಸ್ಪತ್ರೆಗೆ ಹೋದಾಗ ಅಲ್ಲಿ ಬೆಡ್​ ಖಾಲಿ ಇಲ್ಲ ಎಂದಾಗ ಕಣ್ವಾ ಆಸ್ಪತ್ರೆಗೆ ತೆರಳುತ್ತಾರೆ. ಅಲ್ಲಿ ಕೊರೊನಾ ಪರೀಕ್ಷೆ ಮಾಡಿಸಬೇಕು. ಇಲ್ಲಿ ದಾಖಲು​ ಮಾಡಿಕೊಳ್ಳಲ್ಲ ಎಂದಾಗ, ಸುಗುಣಾ ಆಸ್ಪತ್ರೆಗೆ ಕರೆತರುತ್ತಾರೆ. ಅಲ್ಲಿಯೂ ಕೂಡ ಕೋವಿಡ್​ ಪರೀಕ್ಷೆ ಮಾಡಿಸಿಕೊಂಡು ಬನ್ನಿ ಎನ್ನುತ್ತಾರೆ. ಕಿಮ್ಸ್​ಗೆ ಹೋದರೂ ಅಲ್ಲಿಯೂ ಬೆಡ್​ ಭರ್ತಿ​ ಆಗಿತ್ತು. ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಾಗ, 'ನಿಮ್ಮ ಪತ್ನಿಗೆ ಏನೂ ಆಗಿಲ್ಲ. ಆರೋಗ್ಯವಾಗಿ ಇದ್ದಾರೆ. ಈಗ ಮನೆಗೆ ಹೋಗಿ ಎಮರ್ಜೆನ್ಸಿ ಇದ್ದರೇ ಮತ್ತೆ ಬನ್ನಿ' ಎಂದು ವಾಪಸ್ ಕಳುಹಿಸಿದ್ದಾರೆ ಎಂದು ಆಪಾದಿಸಿದರು.

ಕೊರೊನಾ ಪರೀಕ್ಷೆ ಒಡಾಟದ ನಡುವೆ ನನ್ನ ಪತ್ನಿಗೆ ತೀವ್ರ ಉಸಿರಾಟ ಸಮಸ್ಯೆ ಕಾಣಿಸಿಕೊಳ್ಳಲು ಶುರುವಾಯಿತು. ಬಳಿಕ ಕೂಡಲೇ ಆಶೀರ್ವಾದ ಆಸ್ಪತ್ರೆಗೆ ಹೋದರೇ ಅಲ್ಲಿ ಎಕ್ಸ್​ರೆ ಮಾಡಿ, 'ಕಫಾ ಹೆಚ್ಚಾಗಿದೆ ಆಪರೇಷನ್ ಮಾಡಿಸಬೇಕು' ಅಂತ‌ ಹೇಳಿ ವಾಪಸ್ ಕಳಿಸಿದರು. ವಿಧಿ ಇಲ್ಲದೆ ಅಲ್ಲಿಂದ ಕೆ.ಸಿ. ಜನರ್ ಆಸ್ಪತ್ರೆಗೆ ಬಂದು ದಿನಪೂರ್ತಿ ಕಾದರೂ ವೆಂಟಿಲೇಷನ್ ಸಿಗಲಿಲ್ಲ. ಬಳಿಕ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ದೆ, 'ಕೊರೊನಾ ಪರೀಕ್ಷೆ ಮಾಡಿಸಿಕೊಂಡು ಬನ್ನಿ, ಇಲ್ಲವೇ ಬಿಬಿಎಂಪಿಯಿಂದ ಪತ್ರ ತೆಗೆದುಕೊಂಡು ಬನ್ನಿ' ಎಂದರೇ ಹೊರತು ಚಿಕಿತ್ಸೆ ಕೊಡಲಿಲ್ಲ ಎಂದು ಪತಿ ಅಳಲು ವ್ಯಕ್ತಪಡಿಸಿದರು.

ಯಾವುದೇ ದಾರಿ ಕಾಣದೆ ಮತ್ತೆ ಕೆ.ಸಿ. ಜನರಲ್ಅಸ್ಪತ್ರೆಗೆ ಕರೆತಂದೆ. 'ನಮ್ಮಲ್ಲಿ ಕೇವಲ ಐದು ಆಕ್ಸಿಜನ್ ಮಾತ್ರ ಇರುವುದು. ನಾವೇನು ‌ಮಾಡುವುದಕ್ಕೆ ಆಗುವುದಿಲ್ಲ. ನೀವು ಏನು ಬೇಕಾದರೂ ಮಾಡಿಕೊಳ್ಳಿ, ನಮ್ಮಲ್ಲಿ ಬೆಡ್​ ಇಲ್ಲ' ಅಂತ ವಾಪಸ್ ಕಳುಹಿಸಿದರು. ಇದರಿಂದ ಇನ್ನಷ್ಟು ಗಾಬರಿಯಾಗಿ ಮತ್ತೆ ಆಶೀರ್ವಾದ ಆಸ್ಪತ್ರೆಗೆ ಕರೆದುಕೊಂಡು ಹೋದರೆ, 'ಕೊರೊನಾ ಚೆಕ್ ಮಾಡಿಸಿಕೊಂಡು ಬನ್ನಿ' ಅಂತ ವಾಪಸ್ ಕಳಿಹಿಸಿದ್ದರು ಎಂದರು.

ಇಷ್ಟೆಲ್ಲ ಹರಸಾಹಸ ಪಟ್ಟು ನವರಂಗ್ ಬಳಿ ಇರುವ ಖಾಸಗಿ ಆಸ್ಪತ್ರೆಗೆ ಹೋದರೇ 'ಸರ್, ಪೇಷೆಂಟ್ ಫೂಲ್​ ಸೀರಿಯಸ್ ಆಗಿದ್ದಾರೆ. ಬೇಗ ಕೆಸಿಜೆಗೆ ಹೋಗಿ' ಅಂದರು. ಮತ್ತೆ ವಿಧಿ ಇಲ್ಲದೆ ಕೆಸಿಜೆಗೆ ಬಂದೆ. ಅಲ್ಲಿ, ಅಡ್ಮಿಟ್ ಮಾಡಿಕೊಂಡು ಅರ್ಧ ಗಂಟೆ ಬಳಿಕ ನನ್ನ ಕರೆದು, 'ಸರ್ ಈ ಕಾಲುಂಗರ ಮತ್ತೆ ಓಲೆ ನಿಮ್ಮದೆನಾ ನೋಡಿ' ಎಂದರು. ನಾನು ಹೌದು ಎನ್ನುತ್ತಿದ್ದಂತೆ, 'ಸ್ವಾರಿ ಸರ್.... ನಿಮ್ಮ ಪತ್ನಿ ತೀರಿಕೊಂಡಿದ್ದಾರೆ. ನಿಮ್ಮ ಒಡವೆಗಳು ಸರಿಯಾಗಿದೀಯಾ ಚೆಕ್ ಮಾಡಿಕೊಳ್ಳಿ' ಅಂತಾರೆ. 'ನನ್ನ ಪತ್ನಿ ಕೊರಳಲ್ಲಿ ಇದ್ದ ಮಾಂಗಲ್ಯ ಚೈನ್ ಎಲ್ಲಿ' ಎಂದು ಕೇಳಿದ್ರೆ, ಅಸ್ಪತ್ರೆಯ ಸಿಬ್ಬಂದಿ ಪ್ರತಿಕ್ರಿಯೆ ನೀಡಲಿಲ್ಲ ಎಂದು ಬಾಬು ಅಲವತ್ತುಕೊಂಡರು.

ಇಷ್ಟೆಲ್ಲ ಆದ ಮೇಲೆ ನನ್ನನ್ನೇ ದಬಾಯಿಸಿ, '5 ಸಾವಿರ ರೂ. ಬಿಲ್ ಆಗಿದೆ ಬಾಡಿ ಬೇಕಾದ್ರೆ ಮೊದಲು ಬಿಲ್​ ಕಟ್ಟು. ಮಾಂಗಲ್ಯ ಚೈನ್ ನಮಗೆ ಗೊತ್ತಿಲ್ಲ. ಯಾರ್ ಹತ್ರ ಹೋಗ್ತೀಯೋ ಹೋಗು. ಕಂಪ್ಲೆಂಟ್ ಬೇಕಿದ್ರೆ ಕೊಡು. ಐ ಡೋಂಟ್ ಕೇರ್' ಅಂತ ಮುಖಕ್ಕೆ ಹೊಡದಾಗೆ ಹೇಳಿದರು ಎಂದು ಗದ್ಗಿತರಾದರು.

ಸಾವು- ಬದುಕಿನ ನಡುವೆ ಹೋರಾಡುತ್ತಿದ್ದ ನನ್ನ ಪತ್ನಿಗೆ ಸೂಕ್ತ ಚಿಕಿತ್ಸೆ ಕೊಡುವ ಬದಲು, ನನ್ನ ಪತ್ನಿಯ ಮಾಂಗಲ್ಯ ಚೈನ್ ಕದ್ದಿದ್ದಾರೆ ಎಂದು ಮೃತ ಮಹಿಳೆ ಪತಿ ಬಾಬು ಅವರು ಕೆಸಿ ಜನರಲ್ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಗಂಭೀರ ಅರೋಪ ಮಾಡಿದ್ದಾರೆ.

ABOUT THE AUTHOR

...view details