ಕರ್ನಾಟಕ

karnataka

By

Published : Feb 16, 2021, 2:06 AM IST

ETV Bharat / city

ಬಜೆಟ್‍ನಲ್ಲಿ ಯುವ ಸಬಲೀಕರಣಕ್ಕೆ ಹೆಚ್ಚಿನ ಒತ್ತು: ಸಚಿವ ಡಾ. ನಾರಾಯಣಗೌಡ

ಪ್ರತಿ ಜಿಲ್ಲೆಯಲ್ಲಿ ಯುವಕರಿಗೆ ಉದ್ಯೋಗ ಮೇಳ ಆಯೋಜಿಸಬೇಕು. ಯುವಕರಲ್ಲಿನ ಕೌಶಲ್ಯತೆ ಗುರುತಿಸಿ, ಯುವಜನ ಸಂಘಗಳ ಮೂಲಕ ಸರ್ಕಾರದ ನೆರವು ನೀಡಿ, ಸ್ಥಳೀಯವಾಗಿ ಉದ್ಯಮ ಆರಂಭಿಸುವಂತಾಗಬೇಕು. ಯುವ ಸಬಲೀಕರಣ ಮತ್ತು ಕ್ರೀಡೆ ಇಲಾಖೆ ಅಂದರೆ ಕೇವಲ ಕ್ರೀಡೆಗೆ ಮಾತ್ರ ಗಮನ ಹರಿಸುವುದಲ್ಲ, ಯುವ ಸಬಲೀಕರಣ ಅದಕ್ಕಿಂತ ಮುಖ್ಯ. ಯುವಕರು ಸ್ವಾವಲಂಬಿಗಳಾಗುವತ್ತ ಗಮನ ಹರಿಸಿದರೆ ಎಲ್ಲ ಸಮಾಜವಿರೋಧಿ ಚಟುವಟಿಕೆಯಿಂದ ದೂರವಾಗುತ್ತಾರೆ ಎಂದು ಸಚಿವರು ತಿಳಿಸಿದರು.

narayangowda
ಅಧಿಕಾರಿಗಳ ಜೊತೆ ಸಚಿವ ಡಾ. ನಾರಾಯಣಗೌಡ ಸಭೆ

ಬೆಂಗಳೂರು: ಜಿಲ್ಲಾ ಮಟ್ಟದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳು ಯುವ ಜನತೆಯ ಪ್ರತಿನಿಧಿಯಾಗಿ, ಅವರ ಧ್ವನಿಯಾಗಿ ಕೆಲಸ ಮಾಡಬೇಕು. ಯುವ ಜನತೆಯ ಒಟ್ಟಾರೆ ಸಮಸ್ಯೆಗೆ ಸ್ಪಂದಿಸುವ ಕಾರ್ಯ ಅಧಿಕಾರಿಗಳು ಮಾಡಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ಸಚಿವ ಡಾ. ನಾರಾಯಣಗೌಡ ಸೂಚಿಸಿದರು.

ಬೆಂಗಳೂರಲ್ಲಿ ಎಲ್ಲ ಜಿಲ್ಲೆಗಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯಮಟ್ಟದ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಚಿವರು, ಪ್ರಸ್ತುತ ಬಜೆಟ್‍ನಲ್ಲಿ ಯುವ ಸಬಲೀಕರಣಕ್ಕೆ ಹೆಚ್ಚಿನ ಒತ್ತು ಕೊಡಲಾಗುವುದು. ಆದ್ದರಿಂದ ರಾಜ್ಯದಲ್ಲಿರುವ 2.5 ಕೋಟಿ ಯುವ ಜನತೆಯನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಕೆಲಸ ಮಾಡಬೇಕು. ರಾಜ್ಯದಲ್ಲಿ ನಡೆಯುತ್ತಿರುವ ಅಪರಾಧ ಚಟುವಟಿಕೆಯಲ್ಲಿ ಶೇ.50 ರಷ್ಟು ಯುವಕರೇ ಇದ್ದಾರೆ ಎನ್ನುವುದು ಕಳವಳಕಾರಿ ಸಂಗತಿ. ಇದನ್ನ ತಡೆಗಟ್ಟಲು ಹಾಗೂ ಜಾತಿ, ಧರ್ಮ, ಪ್ರಾಂತಗಳ ಆಧಾರದಲ್ಲಿ ಗುಂಪುಗಳಾಗಿ ವಿಂಗಡಣೆ ಹೊಂದುತ್ತಿರುವ ಯುವಕರನ್ನು ಮತ್ತು ದುಶ್ಚಟಗಳಿಗೆ ಬಲಿಯಾಗುತ್ತಿರುವ ಯುವ ಜನತೆಯಲ್ಲಿ, ಇದೆಲ್ಲವನ್ನ ಮೀರಿ ಬೆಳೆಯುವಂತೆ ಮಾಡಲು ಇಲಾಖೆಯಿಂದ ಕಾರ್ಯಕ್ರಮ ರೂಪಿಸಬೇಕು. ಯುವ ಸ್ಪಂದನ, ಯುವಜನ ಸಂಘ ಸ್ಥಾಪಿಸಿ, ಸ್ಥಳೀಯ ಪ್ರೋತ್ಸಾಹಕರ ಜೊತೆಯಲ್ಲಿ ಸರ್ಕಾರದ ನೆರವನ್ನು ಬಳಸಿಕೊಂಡು ಯುವ ಜನತೆ ಸ್ವಾವಲಂಬಿಯಾಗುವಂತೆ ಮಾಡಬೇಕು ಎಂದು ಸಚಿವರು ಹೇಳಿದರು.

ಅಧಿಕಾರಿಗಳ ಜೊತೆ ಸಚಿವ ಡಾ. ನಾರಾಯಣಗೌಡ ಸಭೆ

ಯುವ ಸಬಲೀಕರಣಕ್ಕೆ ಏನೇನು ಕಾರ್ಯಕ್ರಮ ನಿರೂಪಿಸಬೇಕು, ಸರ್ಕಾರದಿಂದ ಏನೇನು ನೆರವು ಅಗತ್ಯವಿದೆ ಎಂಬ ಪ್ರಸ್ತಾವನೆಯನ್ನು ವಾರದೊಳಗೆ ಸಲ್ಲಿಸಲು ಸೂಚನೆ ನೀಡಿದರು. ಇದೇ ವೇಳೆ ಕ್ರೀಡಾ ಇಲಾಖೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಕಡಿಮೆ ಪ್ರಗತಿ ಸಾಧಿಸಿರುವ ಅಧಿಕಾರಿಗಳನ್ನ ಸಚಿವರು ತರಾಟೆಗೆ ತೆಗೆದುಕೊಂಡರು. ಕ್ರೀಡಾಂಗಣ, ಈಜುಕೊಳ ನಿರ್ವಹಣೆ ಸರಿಯಾಗಿರಬೇಕು. ಎಲ್ಲೆಂದರಲ್ಲಿ ಜಿಮ್ ಸ್ಥಾಪನೆ ಮಾಡೋದಲ್ಲ, ಸಾರ್ವಜನಿಕರಿಗೆ ಅನುಕೂಲವಾಗಬೇಕು. ಕೆಲವೆಡೆ ಜಿಮ್ ಸ್ಥಾಪಿಸಿ, ಕೊಠಡಿಗೆ ಬೀಗ ಹಾಕಿ ಇಟ್ಟಿದ್ದಾರೆ. ಸರಿಯಾದ ಸ್ಥಳದಲ್ಲಿ ಜಿಮ್ ನಿರ್ಮಿಸಿ, ಪ್ರತಿನಿತ್ಯ ಸಾರ್ವಜನಿಕರ ಉಪಯೋಗಕ್ಕೆ ಅವಕಾಶವಾಗುವಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿ ಎಂದು ಸಚಿವರು ಹೇಳಿದರು.

ಅಧಿಕಾರಿಗಳ ಜೊತೆ ಸಚಿವ ಡಾ. ನಾರಾಯಣಗೌಡ ಸಭೆ

ಪ್ರತಿ ತಾಲೂಕಿನಲ್ಲೂ ಕ್ರೀಡಾಂಗಣ ಇರಬೇಕು. ಹೊಸದಾಗಿ ಕ್ರೀಡಾಂಗಣ ನಿರ್ಮಾಣಕ್ಕೆ ಸ್ಥಳ ಗುರುತಿಸಬೇಕು. ಪ್ರತಿ ಜಿಲ್ಲೆಯಿಂದ 100 ಕ್ರೀಡಾಪಟುಗಳನ್ನ ಸಿದ್ಧಪಡಿಸಬೇಕು. ಪ್ರವಾಸಿ ತಾಣಗಳಲ್ಲಿ ಕಯಾಕಿಂಗ್, ಪ್ಯಾರಾಸೈಲಿಂಗ್, ಟ್ರೆಕ್ಕಿಂಗ್, ಬೋಟಿಂಗ್‍ನಂತಹ ಸಾಹಸ ಕ್ರೀಡೆಯ ತರಬೇತಿ, ಸ್ಪರ್ಧೆ ಆಯೋಜಿಸಬೇಕು. ಅಂತಹ ಸ್ಥಳಗಳನ್ನು ಪ್ರತಿ ಜಿಲ್ಲೆಯಲ್ಲಿ ಗುರುತಿಸಿ ಮಾಹಿತಿ ನೀಡಿ. ಎಲ್ಲವೂ ಸರ್ಕಾರದ ನೆರವಿನಿಂದಲೇ ಆಗಬೇಕು ಎಂದರೆ ಕಷ್ಟವಾಗಲಿದೆ. ಸ್ಥಳೀಯರ ನೆರವು, ಸಿಎಸ್‍ಆರ್ ಫಂಡ್, ದಾನಿಗಳು, ಖಾಸಗೀಸಹಭಾಗಿತ್ವದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡೆಯ ಅಭಿವೃದ್ಧಿಗೆ ಶ್ರಮಿಸಬೇಕು. ಅಧಿಕಾರಿಗಳು ಆಸಕ್ತಿಯಿಂದ ಕೆಲಸ ಮಾಡಿದರೆ ಮಾತ್ರವೇ ಇದೆಲ್ಲ ಸಾಧ್ಯ. ನಿಮಗೆ ನೀವೇ ಟಾರ್ಗೆಟ್ ಹಾಕಿಕೊಂಡು ಕೆಲಸ ಮಾಡಿ ಎಂದು ಸಚಿವರು ಸೂಚಿಸಿದರು.

ಪ್ರಗತಿ ಪರಿಶೀಲನಾ ಸಭೆಗೂ ಮುನ್ನ, ಯುವ ಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವರು, ವಿವೇಕಾನಂದರ ಜಯಂತಿ ಅಂಗವಾಗಿ ನಿಮ್ಹಾನ್ಸ್ ಸಹಭಾಗಿತ್ವದೊಂದಿಗೆ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ಇಲಾಖೆಯ ಅಪರಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ABOUT THE AUTHOR

...view details