ಬೆಂಗಳೂರು: ರಾಜ್ಯದ ಜೀವ ವೈವಿಧ್ಯ ಬಿಂಬಿಸುವ 'ವೈಲ್ಡ್ ಕರ್ನಾಟಕ' ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ನೀಡಿರುವ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ನ.17 ರವರೆಗೆ ವಿಸ್ತರಿಸಿದೆ.
ಈ ಕುರಿತು ರವೀಂದ್ರ ಎನ್.ರೆಡ್ಕರ್ ಹಾಗೂ ಆರ್.ಕೆ ಉಲ್ಲಾಸ್ ಕುಮಾರ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ, ಸಾಕ್ಷ್ಯಚಿತ್ರ ನಿರ್ಮಾಪಕರ ಪರ ವಕೀಲರು ವಾದಿಸಿ, ಅರ್ಜಿಯ ವಿಚಾರಣಾ ಮಾನ್ಯತೆ ಆಕ್ಷೇಪಿಸಿದರು.
ಅಲ್ಲದೇ, ಯಾವ ಉದ್ದೇಶದಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿಗೆ ಅವಕಾಶ ಮಾಡಿಕೊಡಲಾಗಿದೆಯೋ ಅದನ್ನು ಬುಡಮೇಲು ಮಾಡಲಾಗುತ್ತಿದೆ ಎಂದು ಸುಪ್ರೀಂಕೋರ್ಟ್ ಸೆಂಟ್ರಲ್ ವಿಸ್ಟಾ ಯೋಜನೆ ಪ್ರಕರಣದಲ್ಲಿ ಹೇಳಿದೆ. ಈ ಪ್ರಕರಣದಲ್ಲೂ ಅದೇ ಆಗಿದೆ. ವ್ಯಾಜ್ಯ ಇರುವುದು ಚಿತ್ರ ನಿರ್ಮಾಪಕರು ಮತ್ತು ಸರ್ಕಾರದ ನಡುವೆ. ಈ ಒಪ್ಪಂದ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ಆರೋಪಿಸುತ್ತಿದ್ದಾರೆ. ಉಲ್ಲಂಘನೆಯಾಗಿಲ್ಲ ಎಂದು ಸ್ವತಃ ಸರ್ಕಾರ ಹೇಳಿದೆ. ಇದರಲ್ಲಿ ಅರ್ಜಿದಾರರು ಮಧ್ಯಪ್ರವೇಶಿಸುವುದು ಏಕೆಂಬುದೇ ತಿಳಿಯದು ಎಂದರು.
ಇದಕ್ಕೆ ಅರ್ಜಿದಾರರ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ವಾದ ಪ್ರತಿವಾದ ಆಲಿಸಿದ ಪೀಠ, ಅರ್ಜಿ ವಿಚಾರಣೆಯನ್ನು ನ.17ಕ್ಕೆ ಮುಂದೂಡಿತು. ಅಲ್ಲದೇ 'ವೈಲ್ಡ್ ಕರ್ನಾಟಕ' ಸಾಕ್ಷ್ಯಚಿತ್ರವನ್ನು ಯಾವುದೇ ರೂಪದಲ್ಲೂ ಪ್ರಸಾರ ಮಾಡಬಾರದು ಅಥವಾ ಮರು ಮುದ್ರಣ, ವಿತರಣೆ ಹಾಗೂ ಮಾರಾಟ ಮಾಡಬಾರದು ಎಂದು ಈ ಹಿಂದೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಮುಂದಿನ ವಿಚಾರಣೆವರೆಗೂ ವಿಸ್ತರಿಸಿ ಆದೇಶಿಸಿತು.
(ಶ್ರೀಮಂತ ಕ್ರಿಕೆಟ್ ಟೂರ್ನಿ ಐಪಿಎಲ್ಗೆ ಮತ್ತೆರಡು ಹೊಸ ತಂಡ ಸೇರ್ಪಡೆ.. ಸಾವಿರಾರು ಕೋಟಿಗೆ ಖರೀದಿ)