ಬೆಂಗಳೂರು:ಆನೇಕಲ್ ತಾಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಹುಲಿ ಸಫಾರಿಯ ಮನೆ ಮಾತಾಗಿದ್ದ ಬಿಳಿ ಹುಲಿ ಹಾಗೂ ಹೃದಯ ಸಂಬಂಧಿ ಖಾಯಿಲೆಯಿಂದ ನರಳುತ್ತಿದ್ದ 12 ವರ್ಷದ ಸಿಂಹಿಣಿ ಸಾವನ್ನಪ್ಪಿದ್ದು, ಬನ್ನೇರುಘಟ್ಟ ಉದ್ಯಾನದ ಪ್ರಾಣಿಪ್ರಿಯರಿಗೆ ಬೇಸರ ತಂದಿದೆ.
ಆರು ವರ್ಷದ ಬಿಳಿ ಹೆಣ್ಣು ಹುಲಿ ʻವನ್ಯಾʼ ಬನ್ನೇರುಘಟ್ಟ ಉದ್ಯಾನದ ಸೂರ್ಯಾ - ಸುಬದ್ರಾ ಜೋಡಿ ಮಗಳಾಗಿ ಜನಿಸಿತ್ತು. ಏಪ್ರಿಲ್ 22ರಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಿಳಿ ಹುಲಿ ವನ್ಯಾ ಬ್ಲಡ್ ಪಾರಾಸೈಟ್ ರೋಗದಿಂದ ನರಳುತಿತ್ತು. ವೈದ್ಯರ ತೀರ್ವ ನಿಗಾವಣೆಯಲ್ಲಿದ್ದ ಹುಲಿ ಬಹು ಅಂಗಾಂಗಗಳ ವೈಫಲ್ಯದಿಂದ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ.
ಸಿಂಹಿಣಿ 'ಸನಾ' 2010 ಏಪ್ರಿಲ್ 05ರಂದು ಗಣೇಶ ಮತ್ತು ಹೇಮಾ ಎಂಬ ಸಿಂಹ ದಂಪತಿಗೆ ಜನಿಸಿತ್ತು. ಈವರೆಗೆ ಹತ್ತು ಮರಿಗಳಿಗೆ ಜನ್ಮ ನೀಡಿ ಸಿಂಹದ ಸಂತತಿಯನ್ನು ಹೆಚ್ಚಿಸಿದ ಖ್ಯಾತಿ ಸನಾದಾಗಿತ್ತು. ಕಳೆದ ಜೂನ್ 12 ರಿಂದ ತೀವ್ರ ಅನಾರೋಗ್ಯದಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಸನಾ ಕೂಡ ಸಾವನ್ನಪ್ಪಿದೆ.
ಎರಡು ಪ್ರಾಣಿಗಳ ಸಾವಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನದ ಪ್ರಾಣಿ ಪಾಲಕರು ಹಾಗೂ ಜೀವ ಪ್ರಿಯರು ಕಂಬನಿ ಮಿಡಿದಿದ್ದಾರೆ. ಸನಾ ದೇಹದ ಅಂಗಾಂಗಗಳ ಮಾದರಿಯನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಲು ಹೆಬ್ಬಾಳ ಪಶು ಸಂಶೋಧನಾ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ ಎಂದು ಉದ್ಯಾನದ ಅಧಿಕಾರಿಗಳು ಮಾಧ್ಯಮ ಪ್ರಕಟಣೆಯಲ್ಕಿ ತಿಳಿಸಿದ್ದಾರೆ.
ಇದನ್ನೂ ಓದಿ :ಈ ವರ್ಷವೇ ಕಬಿನಿ ಜಲಾಶಯದ ಉದ್ಯಾನ ಆರಂಭ: ಸಿಎಂ ಭರವಸೆ