ಬೆಂಗಳೂರು: ಸರ್ಕಾರದ ಆದೇಶ ಮೀರಿ ಕೋವಿಡ್ ಸೋಂಕು ಪರೀಕ್ಷೆಗೆ ಹೆಚ್ಚು ಹಣ ಪಡೆದಿದ್ದ ವಿಕ್ರಂ ಆಸ್ಪತ್ರೆ ಆಡಳಿತ ಮಂಡಳಿ, ಹೆಚ್ಚುವರಿಯಾಗಿ ಪಡೆದ ಹಣವನ್ನು ಗ್ರಾಹಕರಿಗೆ ಮರಳಿಸುವುದಾಗಿ ಬಿಬಿಎಂಪಿಗೆ ತಿಳಿಸಿದೆ.
ಸರ್ಕಾರ ಜುಲೈ 24 ರಂದು ಕೋವಿಡ್ ಸೋಂಕು ಪರೀಕ್ಷೆ ನಡೆಸಲು ಖಾಸಗಿ ಆಸ್ಪತ್ರೆಗಳಲ್ಲಿ ಮೂರು ಸಾವಿರ ಶುಲ್ಕ ವಿಧಿಸಬೇಕು ಎಂದು ದರ ನಿಗದಿ ಮಾಡಿತ್ತು. ಆದರೂ ನಗರದ ಬಹುತೇಕ ಖಾಸಗಿ ಆಸ್ಪತ್ರೆಗಳು ಹೆಚ್ಚು ಬಿಲ್ ಪಡೆಯುತ್ತಿದ್ದವು.
ವಿಕ್ರಂ ಆಸ್ಪತ್ರೆ ನೋಟಿಸ್ ಇದರಿಂದಾಗಿ ಇಂದು ಬಿಬಿಎಂಪಿ ಅಧಿಕಾರಿಗಳ ತಂಡ ವಿಕ್ರಂ ಆಸ್ಪತ್ರೆಗೆ ತೆರಳಿ ಪರಿಶೀಲಿಸಿದಾಗ, ಅಲ್ಲಿ ಎರಡು ಗಂಟೆಯಲ್ಲಿ ರಿಸಲ್ಟ್ ತಿಳಿಸುವ (CB NAAT) ಕೋವಿಡ್ ಸೋಂಕು ಪರೀಕ್ಷೆಗೆ 5500 ರೂ. ಪಡೆಯುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.
ಅಲ್ಲದೆ ಜುಲೈ 24 ರಿಂದ ಇಲ್ಲಿಯವರೆಗೆ 44 ಜನರಿಗೆ ಟೆಸ್ಟ್ ಮಾಡಿದ್ದು ಎಲ್ಲರಿಂದಲೂ 5500 ರೂ. ಪಡೆಯಲಾಗಿದೆ. ಹೀಗಾಗಿ ಐಸಿಎಂಆರ್ ಹಾಗೂ ಸರ್ಕಾರದ ನಿಯಮದ ಪ್ರಕಾರ ಟೆಸ್ಟ್ ಮಾಡಿಸಿದ ಜನರಿಗೆ ಹೆಚ್ಚುವರಿ ಹಣವನ್ನು ವಾಪಸು ನೀಡುವುದಾಗಿ ಆಸ್ಪತ್ರೆ ಒಪ್ಪಿಕೊಂಡಿದೆ.
ಸದ್ಯ ವಿಕ್ರಂ ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿದ ಜನರು ರಿಫಂಡ್ ಹಣ ಪಡೆಯುವಂತೆ ಬಿಬಿಎಂಪಿ ತಿಳಿಸಿದೆ.