ಬೆಂಗಳೂರು: ನಗರದಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ಚಳಿಗೆ ದೇಹ ಬೆಚ್ಚಗಿಡಲು ನುಗ್ಗೆಕಾಯಿ ತಿನ್ನೋಣ ಎಂದು ನೀವು ಮುಂದಾದ್ರೆ ಜೇಬು ಸುಡುವುದು ಗ್ಯಾರಂಟಿ. ನುಗ್ಗೆಕಾಯಿ 1 ಕೆ.ಜಿ ಗೆ ಈಗ ಬರೋಬ್ಬರಿ 400 ರೂ. ಗೆ ಮಾರಾಟವಾಗುತ್ತಿರುವುದು ಗ್ರಾಹಕರನ್ನು ಕಂಗಾಲಾಗಿಸಿದೆ.
ಈ ವರ್ಷ ಸುರಿದ ಭಾರಿ ಮಳೆಯಿಂದಾಗಿ ರಾಜ್ಯದಲ್ಲಿ ಹಣ್ಣು, ತರಕಾರಿ ಬೆಳೆಗಳು ಮಣ್ಣುಪಾಲಾಗಿವೆ. ಸೊಪ್ಪು, ತರಕಾರಿ ಬೆಲೆ ನಾಲ್ಕು ಪಟ್ಟು ಏರಿದೆ. ನುಗ್ಗೆಕಾಯಿಗೆ ಭಾರಿ ಬೇಡಿಕೆ ಇದೆ, ಆದರೆ ಸಿಗುತ್ತಿಲ್ಲ. ಡಿಸೆಂಬರ್ನಲ್ಲಿ ಎಲ್ಲಾ ಅಂಗಡಿಗಳಲ್ಲಿ ಸಿಗುತ್ತಿದ್ದ ನುಗ್ಗೆಕಾಯಿ, ಇದೀಗ ಪೂರೈಕೆ ಕಡಿಮೆಯಾದಂತೆ ಕಾಣುತ್ತಿದೆ.
ಕಳೆದ ವರ್ಷ ಈ ಸಂದರ್ಭದಲ್ಲಿ ಕೆಜಿಗೆ 40 ರೂ. ಇದ್ದ ನುಗ್ಗೆಕಾಯಿ ಭಾನುವಾರ 10 ಪಟ್ಟು ಹೆಚ್ಚಾಗಿ ಕೆ.ಜಿಗೆ 400 ರೂ. ಗಿಂತ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ. ಸ್ಥಳೀಯವಾಗಿ ಎಲ್ಲೂ ನುಗ್ಗೆಕಾಯಿ ಸಿಗದ ಹಿನ್ನೆಲೆ ಬಹಳಷ್ಟು ವ್ಯಾಪಾರಿಗಳು ಹೋಲ್‌ಸೇಲ್ ಮಾರಾಟಗಾರರಿಗೆ ಮುಂಗಡ ಹಣ ಕೊಟ್ಟು ಗುಜರಾತ್‌ನಿಂದ ತರಿಸಿಕೊಳ್ಳುತ್ತಿದ್ದಾರೆ.
ದಿನದಿಂದ ದಿನಕ್ಕೆ ತರಕಾರಿ ಬೆಲೆ ಹೆಚ್ಚಾಗುತ್ತಿದೆ. ಈ ಬೆಲೆ ಏರಿಕೆ ಇನ್ನೂ ಎರಡು, ಮೂರು ತಿಂಗಳು ಮುಂದುವರೆಯಲಿದೆ ಎನ್ನಲಾಗುತ್ತಿದೆ. ಟೊಮೆಟೊ ಕೆ.ಜಿ ಗೆ 100 ರೂ. ಗಿಂತ ಕಡಿಮೆ ಸಿಗುತ್ತಿಲ್ಲ.
ಕೊಂಚ ಕಡಿಮೆಯಾಗಿದ್ದ ಬೆಲೆ:ಕಳೆದೊಂದು ವಾರದ ಹಿಂದೆ ಕೊಂಚ ಕಡಿಮೆಯಾಗಿದ್ದ ಹಣ್ಣು, ತರಕಾರಿಗಳ ಬೆಲೆ ಈ ವಾರದ ಪ್ರಾರಂಭದಲ್ಲೇ ಮತ್ತೆ ಗಗನಕ್ಕೇರಿದೆ. ರಾಜಧಾನಿಗೆ ಬೇರೆ ಬೇರೆ ರಾಜ್ಯಗಳಿಂದ ಬರುತ್ತಿದ್ದ ತರಕಾರಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಹೊಸದಾಗಿ ಬೆಳೆದ ತರಕಾರಿ ರೈತರ ಕೈ ಸೇರುವವರೆಗೂ ಇದೇ ಪರಿಸ್ಥಿತಿ ಮುಂದುವರೆಯುತ್ತದೆ ಎಂದು ಸಗಟು ವ್ಯಾಪಾರಿಗಳು ಹೇಳುತ್ತಿದ್ದಾರೆ.