ಬೆಂಗಳೂರು: ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ನಾಳೆ ಬೆಳಗ್ಗೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಸಂಜೆ ನಾಲ್ಕು ಗಂಟೆಗೆ ಸಿದ್ದರಾಮಯ್ಯನವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿಯಾಗಲಿದ್ದಾರೆ. ಬಳಿಕ ಬುಧವಾರ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ರಾಜ್ಯ ರಾಜಕೀಯದಲ್ಲಿ ಆಗುತ್ತಿರುವ ಬದಲಾವಣೆ ಹಾಗೂ ಸರ್ಕಾರದ ವಿರುದ್ಧ ಮುಂಬರುವ ದಿನಗಳಲ್ಲಿ ಕೈಗೊಳ್ಳುವ ಹೋರಾಟದ ಕುರಿತು ರಾಹುಲ್ ಗಾಂಧಿ ಜೊತೆ ಸಿದ್ದರಾಮಯ್ಯ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ಹಾಗೂ ಇತರೆ ವಿಚಾರಗಳ ಕುರಿತು ರಾಜ್ಯದಲ್ಲಿ ಕಾಂಗ್ರೆಸ್ ಕೈಗೊಳ್ಳುವ ಹೋರಾಟಗಳು ಹಾಗೂ ಪಕ್ಷ ಸಂಘಟನೆಗೆ ಮುಂಬರುವ ದಿನಗಳಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಕುರಿತು ಸಿದ್ದರಾಮಯ್ಯ ಮಾಹಿತಿ ನೀಡಲಿದ್ದಾರೆ.
ಜೊತೆಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮುಂದಿನ ವಿಧಾನಸಭೆ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಉಪಚುನಾವಣೆ ಗೆಲುವಿಗೆ ಕೈಗೊಂಡಿರುವ ಕಾರ್ಯತಂತ್ರಗಳ ಕುರಿತು ವಿವರ ಒದಗಿಸಲಿದ್ದಾರೆ. ಇನ್ನು, ಸಿದ್ದರಾಮಯ್ಯನವರು ದಿಢೀರ್ ಆಗಿ ದೆಹಲಿಗೆ ತೆರಳಲು ಮುಂದಾಗಿರುವುದು ಪಕ್ಷದಲ್ಲಿ ದೊಡ್ಡ ಚರ್ಚೆಗೆ ಕೂಡ ಗ್ರಾಸವಾಗಿದೆ.