ಬೆಂಗಳೂರು: ಆನ್ಲೈನ್ ಆ್ಯಪ್ಗಳ ಮೂಲಕ ಸಾರ್ವಜನಿಕರಿಗೆ ಲೋನ್ ಕೊಟ್ಟು ಬಡ್ಡಿ, ಚಕ್ರ ಬಡ್ಡಿ, ಸರ್ವೀಸ್ ಚಾರ್ಜ್ ಹೆಸರಿನಲ್ಲಿ ಮಾನಸಿಕ ಕಿರುಕುಳ ನೀಡಿ ಹೆಚ್ಚು ಹಣ ವಸೂಲಿ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸೈಯದ್ ಅಹ್ಮದ್, ಸೈಯದ್ ಇರ್ಫಾನ್, ಆದಿತ್ಯಾ ಸೇನಾಪರಿ ಬಂಧಿತ ಆರೋಪಿಗಳು. ಇವರು ಆನ್ಲೈನ್ ಲೋನ್ ಆ್ಯಪ್ಗಳನ್ನು ಡೌನ್ಲೋಡ್ ಮಾಡುವ ವ್ಯಕ್ತಿಗಳನ್ನು ಟಾರ್ಗೇಟ್ ಮಾಡುತ್ತಿದ್ದರು.
ಹಣ ಪಡೆದವರು ಸರಿಯಾದ ಕಂತುಗಳಲ್ಲಿ ಕಟ್ಟಿದ್ದರು ಕೂಡ ಸಮಯಕ್ಕೆ ಸರಿಯಾಗಿ ಕಟ್ಟಿಲ್ಲವೆಂದು ಬಡ್ಡಿ, ಚಕ್ರಬಡ್ಡಿ ವಿಧಿಸಿ ಅವರ ಮೊಬೈಲ್ ನಂಬರ್ಗೆ ಅಶ್ಲೀಲ ವಿಡಿಯೋಗಳನ್ನು ಹಾಗೂ ಅವಾಚ್ಯ ಶಬ್ದಗಳನ್ನು ಬಳಸಿ ಸಂದೇಶ ಕಳುಹಿಸುವ ಮೂಲಕ ಮಾನಸಿಕ ಕಿರುಕುಳ ನೀಡುತ್ತಿದ್ದರು.
ಇದರಿಂದಾಗಿ ಮಾನಸಿಕವಾಗಿ ನೊಂದ ಕೆಲ ವ್ಯಕ್ತಿಗಳು ಸೈಬರ್ ಠಾಣೆಗೆ ದೂರು ನೀಡಿದ್ರು. ಪ್ರಕರಣದ ಕುರಿತು ತನಿಖೆ ಆರಂಭಿಸಿದ ಪೊಲೀಸರು ಕೊರಮಂಗಲದಲ್ಲಿದ್ದ ಆನ್ಲೈನ್ ಆ್ಯಪ್ಗಳ ಮೂಲಕ ಸಾಲ ನೀಡುವ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಇದೇ ರೀತಿ ಬಹಳಷ್ಟು ಮಂದಿಗೆ ದೋಖಾ ಮಾಡಿರುವುದು ಬೆಳಕಿಗೆ ಬಂದಿದೆ.
ಇನ್ನು, ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಈ ಆ್ಯಪ್ಗಳು ಚೀನಾದಾಗಿದ್ದು, ಇದರ ಮಾಲೀಕರು ಸಹ ಚೀನಾದವರಾಗಿದ್ದಾರೆ. ಮನಿ ಡೇ, ಪೈಸಾ ಪೆ, ಲೋನ್ ಟೈಂ, ರೂಪಿಕಾರ್ಟ್, ಇನ್ಕ್ಯಾಸ್ ಮುಂತಾದ ಆ್ಯಪ್ ಬಳಸಿ ಗ್ರಾಹಕರಿಗೆ ಹಣ ನೀಡುತ್ತಿದ್ದರು ಎಂದು ತಿಳಿದು ಬಂದಿದೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ 35 ಲ್ಯಾಪ್ಟಾಪ್, 200 ಬೇಸಿಕ್ ಮೊಬೈಲ್, ವಿವಿಧ ಬ್ಯಾಂಕ್ ಚೆಕ್, 12 ವಿವೋ ಮತ್ತು 8 ಒಪೋ ಮೊಬೈಲ್, ವಿವಿಧ ಕಂಪನಿಯ 30 ಸಿಮ್ ವಶಪಡಿಸಿಕೊಂಡಿದ್ದಾರೆ.