ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಲೇ ಇದೆ. ಪೊಲೀಸ್ ಕಾರ್ಯಾಚರಣೆ ಕೂಡ ಚುರುಕುಗೊಂಡಿದೆ. ರಾತ್ರೋರಾತ್ರಿ ಮನೆಗೆ ನುಗ್ಗಿ ನಗದು, ಚಿನ್ನಾಭರಣ ಕದ್ದಿದ್ದ ಇಬ್ಬರು ಖತರ್ನಾಕ್ ಖದೀಮರೀಗ ಪೊಲೀಸರ ಅತಿಥಿಯಾಗಿದ್ದಾರೆ. 1.76 ಕೋಟಿ ರೂಪಾಯಿ ನಗದು ಹಾಗೂ 12 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕುಮಾರಸ್ವಾಮಿ ಲೇಔಟ್ ಪೊಲೀಸರು ಯಶಸ್ವಿಯಾಗಿದ್ದಾರೆ. ಸುನಿಲ್ ಕುಮಾರ್ ಹಾಗೂ ದಿಲೀಪ್ ಬಂಧಿತರು. ಬಂಧಿತರನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದ್ದು, ತನಿಖೆ ಚುರುಕುಗೊಂಡಿದೆ.
ಸುನೀಲ್ ಕುಮಾರ್ ಸುಬ್ರಮಣ್ಯಪುರ ನಿವಾಸಿಯಾಗಿದ್ದು, ಜೀವನ ಸಾಗಿಸಲು ಆಟೋ ಓಡಿಸಿಕೊಂಡಿದ್ದ. ಮತ್ತೊಬ್ಬ ಆರೋಪಿ ದಿಲೀಪ್ ಮಂಡ್ಯದವನಾಗಿದ್ದು, ಮಾಗಡಿ ರೋಡ್ನಲ್ಲಿ ವಾಸವಾಗಿದ್ದ. ಈ ಪ್ರಕರಣಕ್ಕೂ ಮೊದಲೇ, ಕಳ್ಳತನ ಹಾಗೂ ಡ್ರಗ್ಸ್ ಪ್ರಕರಣಗಳಲ್ಲಿ ಇಬ್ಬರು ಜೈಲು ಸೇರಿದ್ದರು. ಜೈಲಿನಲ್ಲಿದ್ದಾಗ ಪರಸ್ಪರ ಪರಿಚಯವಾಗಿ ಸ್ನೇಹಿತರಾಗಿದ್ದಾರೆ. ಜಾಮೀನಿನ ಮೇರೆಗೆ ಹೊರಬಂದ ಬಳಿಕ ನಿನ್ನ ಜೀವನದ ದಿಕ್ಕನ್ನೇ ಬದಲಾಯಿಸುತ್ತೇನೆ ಎಂದು ದಿಲೀಪ್ಗೆ ಸುನೀಲ್ ಭರವಸೆ ನೀಡಿದ್ದ.
ಜೈಲಿನಿಂದ ಹೊರ ಬಂದ ಬಳಿಕ ಚಾಲಕನಾಗಿ ಆಟೋ ಓಡಿಸುತ್ತಿದ್ದ ಸುನೀಲ್ ಒಮ್ಮೆ ಜೆಪಿ ನಗರದಿಂದ ಕೆ.ಎಸ್. ಲೇಔಟ್ಗೆ ಬಾಡಿಗೆಗೆ ಬಂದಿದ್ದ. ಸಂದೀಪ್ ಲಾಲ್ ಎನ್ನುವವರಿಗೆ ಆರೋಪಿ ಸುನೀಲ್ ಪ್ಯಾಸೆಂಜರ್ ಡ್ರಾಪ್ ಕೊಟ್ಟಿದ್ದ. ಈ ವೇಳೆ ಸಂದೀಪ್ ಲಾಲ್ ತಂದೆ ಮನಮೋಹನ್ ಲಾಲ್ ವ್ಯಕ್ತಿಯೊಬ್ಬರಿಗೆ ಕಂತೆ ಕಂತೆ ಹಣ ಕೊಡುವುದನ್ನು ಸುನೀಲ್ ನೋಡಿದ್ದ. ಅಲ್ಲದೇ ಮನೆ ಮುಂದೆ ಐಷಾರಾಮಿ ಬೈಕ್ಗಳು ನಿಂತಿದ್ದವು. ಸಂದೀಪ್ ಲಾಲ್ ಒಬ್ಬನೇ ಒಂದು ಮನೆಯಲ್ಲಿ ವಾಸವಿದ್ದ. ಅವರ ತಂದೆ ಮನಮೋಹನ್ ಲಾಲ್ ಮತ್ತು ತಾಯಿ ಪಕ್ಕದಲ್ಲೇ ಮನೆ ಮಾಡಿಕೊಂಡು ವಾಸವಿದ್ದು, ಆಗಾಗ ಬಂದು ಹೋಗುತ್ತಿದ್ದದ್ದನ್ನು ಅರಿತುಕೊಂಡಿದ್ದ.
ಕೆಲಸದ ಸಲುವಾಗಿ ಸಂದೀಪ್ ಲಾಲ್ ಚೆನ್ನೈಗೆ ಹೋಗಿದ್ದರು. ಇನ್ನೊಂದೆಡೆ ಖದೀಮ ಮನೆ ಬಳಿ ಒಂದು ಮಾಲೀಕರ ಚಲನವಲನ ಗಮನಿಸಿದ್ದಾನೆ. ಸಹಚರ ದಿಲೀಪ್ ನನ್ನು ಜೊತೆಗೆ ಕರೆದುಕೊಂಡು ಬಂದು ಕಳ್ಳತನಕ್ಕೆ ಪ್ಲಾನ್ ಮಾಡಿಕೊಂಡಿದ್ದ. ಮಾರ್ಚ್ 28ರಂದು ಮನೆ ಬಳಿ ಬಂದ ಸುನೀಲ್ ಮತ್ತು ದಿಲೀಪ್ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಖಾತ್ರಿ ಪಡಿಸಿಕೊಂಡು ಅದೇ ರಾತ್ರಿ 12ಗಂಟೆಗೆ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದಾರೆ.