ಕರ್ನಾಟಕ

karnataka

ETV Bharat / city

ಇಂದಿನಿಂದ ರಾಜ್ಯಾದ್ಯಂತ ಪೌರಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ: ತ್ಯಾಜ್ಯ ಸಮಸ್ಯೆ ಮತ್ತಷ್ಟು ಉಲ್ಬಣ

ಸಫಾಯಿ ಕರ್ಮಾಚಾರಿ, ಸ್ವೀಪರ್ ಸೇರಿದಂತೆ ಪೌರಕಾರ್ಮಿಕರಿಗೆ ಮಾಸಿಕ ಸುಮಾರು 14,000 ರೂ. ಅಲ್ಪ ವೇತನ ನೀಡಲಾಗುತ್ತಿದೆ. ಇದರಿಂದ ಮೂಲ ಅಗತ್ಯಗಳನ್ನು ಈಡೇರಿಸುವುದೇ ದುಸ್ತರವಾಗಿ ಪರಿಣಮಿಸಿದೆ. ಹೀಗಾಗಿ, ನೇರ ನೇಮಕಾತಿ ಮಾಡಬೇಕು ಎಂಬುದು ಪೌರಕಾರ್ಮಿಕ ಒಕ್ಕೂಟ ಒತ್ತಾಯಿಸಿ ರಾಜ್ಯಾದ್ಯಂತ ಪೌರಕಾರ್ಮಿಕರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ.

ಪೌರಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ
ಪೌರಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ

By

Published : Jul 1, 2022, 7:30 AM IST

ಬೆಂಗಳೂರು: ಇಂದಿನಿಂದ ರಾಜ್ಯಾದ್ಯಂತ ಪೌರಕಾರ್ಮಿಕರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ. ನೇರ ನೇಮಕಾತಿ ಸೇರಿದಂತೆ ಸುರಕ್ಷತಾ ಕವಚಗಳು, ನಿವೃತ್ತಿ ಸೇವಾ ಸೌಲಭ್ಯಗಳು ಮತ್ತು ಇತರ ಕಲ್ಯಾಣ ಸೌಲಭ್ಯಗಳನ್ನ ನೀಡುವಂತೆ ಆಗ್ರಹಿಸಿ ಪೌರ ಕಾರ್ಮಿಕರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಸ್ವಚ್ಛತಾ ಕಾರ್ಮಿಕರ ಮುಷ್ಕರದಿಂದಾಗಿ ತ್ಯಾಜ್ಯ ಸಮಸ್ಯೆ ಉಲ್ಬಣಿಸಲಿದೆ.

ಪೌರ ಕಾರ್ಮಿಕರ ಬೇಡಿಕೆ ಏನು?:ಕೆಲಸದ ಖಾಯಮಾತಿ ಪೌರಕಾರ್ಮಿಕರ ಪ್ರಮುಖ ಬೇಡಿಕೆಯಾಗಿದೆ. ಸಫಾಯಿ ಕರ್ಮಾಚಾರಿ, ಸ್ವೀಪರ್ ಸೇರಿದಂತೆ ಪೌರಕಾರ್ಮಿಕರಿಗೆ ಮಾಸಿಕ ಸುಮಾರು 14,000 ರೂ. ಅಲ್ಪ ವೇತನ ನೀಡಲಾಗುತ್ತಿದೆ. ಇದರಿಂದ ಮೂಲ ಅಗತ್ಯಗಳನ್ನು ಈಡೇರಿಸುವುದೇ ದುಸ್ತರವಾಗಿ ಪರಿಣಮಿಸಿದೆ. ಹೀಗಾಗಿ, ನೇರ ನೇಮಕಾತಿ ಮಾಡಬೇಕೆಂಬುದು ಪೌರಕಾರ್ಮಿಕ ಒಕ್ಕೂಟದ ಪ್ರಮುಖ ಬೇಡಿಕೆಯಾಗಿದೆ.

ಮಾರ್ಚ್ 2017ರಲ್ಲಿ ಸಿದ್ದರಾಮಯ್ಯ ಸರ್ಕಾರವಿದ್ದಾಗ ಸಂಪುಟ ಸಭೆಯಲ್ಲಿ ಪೌರಕಾರ್ಮಿರನ್ನು ಖಾಯಮಾತಿಗೊಳಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿತ್ತು. ಆದರೆ, ಸಿದ್ದರಾಮಯ್ಯ ಸರ್ಕಾರವೇ ಪ್ರಸ್ತಾವನೆಯನ್ನು ಅನುಷ್ಠಾನಗೊಳಿಸಲು ವಿಫಲವಾಯಿತು. ಬಳಿಕ ಬಂದ ಸರ್ಕಾರಗಳು ಈ ನಿಟ್ಟಿನಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವ ಗೋಜಿಗೆ ಹೋಗಿಲ್ಲ.

ಸಿದ್ದರಾಮಯ್ಯ ಸರ್ಕಾರ ಗುತ್ತಿಗೆ ವ್ಯವಸ್ಥೆಯನ್ನು ರದ್ದುಗೊಳಿಸಿ, ನೇರ ಪಾವತಿ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಿತ್ತು. ಪೌರಕಾರ್ಮಿಕರ ವಿಶೇಷ ನೇಮಕಾತಿ ನಿಯಮ 2017ರಲ್ಲಿ ರಸ್ತೆ ಸ್ವಚ್ಛಗೊಳಿಸುವವರನ್ನು ಮಾತ್ರ ಪೌರಕಾರ್ಮಿಕರೆಂದು ಪರಿಗಣಿಸಿತ್ತು. ಉಳಿದಂತೆ ಒಳಚರಂಡಿ ಶುಚಿಗೊಳಿಸುವ ಕಾರ್ಮಿಕರು, ಕಸ ತೆಗೆಯುವವರು, ಕಸದ ಲಾರಿ ಚಾಲಕರು, ಕಸ ಲೋಡ್ ಮಾಡುವವರು, ಹೆಲ್ಪರ್ಸ್ ಗಳು ಗುತ್ತಿಗೆ ಆಧಾರದಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ.

ಖಾಯಂ ಕಾರ್ಮಿಕರು ಮಾಸಿಕ 40,000 - 45,000 ರೂ. ಪಡೆಯುತ್ತಿದ್ದರೆ, ಗುತ್ತಿಗೆ ಪೌರಕಾರ್ಮಿಕರು ಕೇವಲ 14,000 ರೂ. ಪಡೆಯುತ್ತಿದ್ದಾರೆ. ಕನಿಷ್ಟ 17,000 ಪೌರಕಾರ್ಮಿಕರನ್ನು ಖಾಯಮಾತಿ ಮಾಡುಬೇಕೆಂಬುದು ಒಕ್ಕೂಟದ ಆಗ್ರಹ.

ಖಾಯಂ, ಗುತ್ತಿಗೆ ಪೌರಕಾರ್ಮಿಕರು ಎಷ್ಟು ಮಂದಿ?:ರಾಜ್ಯದಲ್ಲಿ ಸುಮಾರು 54,512 ಗುತ್ತಿಗೆ ಪೌರ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ ಸುಮಾರು 17,000 ಬೆಂಗಳೂರು ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಖಾಯಂ ಪೌರಕಾರ್ಮಿರ ಸಂಖ್ಯೆ ಸುಮಾರು 10,755 ಆಸು ಪಾಸು ಇದೆ ಎಂದು ಪೌರಕಾರ್ಮಿಕರ ಒಕ್ಕೂಟ ತಿಳಿಸಿದೆ.

ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗ ನೀಡಿರುವ ಮಾಹಿತಿಯಂತೆ ಪೌರಕಾರ್ಮಿರನ್ನು ಖಾಯಂ ಕಾರ್ಮಿಕರು, ನೇರ ಪಾವತಿ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು, ಹೊರಗುತ್ತಿಗೆ ಕಾರ್ಮಿಕರು ಹಾಗೂ ದಿನಗೂಲಿ ಕಾರ್ಮಿಕರಾಗಿ ವಿಂಗಡಿಸಲಾಗಿದೆ. ರಾಜ್ಯದಲ್ಲಿ ಒಟ್ಟು 41,373 ಪೌರಕಾರ್ಮಿಕರು, 12,387 ಲೋಡರ್ಸ್ ಮತ್ತು ಕ್ಲೀನರ್ಸ್, 752 ಒಳಚರಂಡಿ ಹೆಲ್ಪರ್ಸ್ ಇದ್ದಾರೆ.

ಈ ಪೈಕಿ 26,349 ಪೌರಕಾರ್ಮಿಕರು ನೇರ ಪಾವತಿ ಪದ್ಧತಿಯಲ್ಲಿದ್ದಾರೆ. ಇದರಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 16,516 ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. 11,916 ಲೋಡರ್ಸ್ ಮತ್ತು ಕ್ಲೀನರ್ಸ್ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಈ ಪೈಕಿ 10,200 ಮಂದಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸರ್ಕಾರ ಕೊಟ್ಟಿರುವ ಆಶ್ವಾಸನೆ ಏನು?: ಆರ್ಥಿಕ ಇಲಾಖೆ ಅನುಮೋದನೆ ನೀಡಿರುವ 5,300 ಮಂದಿ ಪೌರ ಕಾರ್ಮಿಕರ ಹುದ್ದೆಯನ್ನು ಭರ್ತಿ ಮಾಡುವುದು ಹಾಗೂ ನೇರ ಪಾವತಿ ವೇತನ ಪಡೆಯುತ್ತಿರುವ ಪೌರ ಕಾರ್ಮಿಕರ ಸೇವೆಯನ್ನು ಮುಂದಿನ 3 ವರ್ಷಗಳಲ್ಲಿ ಹಂತ ಹಂತವಾಗಿ ಖಾಯಂಗೊಳಿಸಲು ಕ್ರಮ ಕೈಗೊಳ್ಳುವ ಭರವಸೆಯನ್ನು ಸರ್ಕಾರ ನೀಡಿದೆ.

ಪೌರ ಕಾರ್ಮಿಕರು ಮತ್ತು ಸ್ವಚ್ಛತಾ ನೌಕರರ ಆರೋಗ್ಯವನ್ನು ಗಮನದಲ್ಲಿರಿಸಿಕೊಂಡು ಪ್ರಸ್ತುತ ಜಾರಿಯಲ್ಲಿರುವ ಆರೋಗ್ಯ ವಿಮೆ ಸೌಲಭ್ಯವನ್ನು ಎಲ್ಲಾ ಪೌರ ಕಾರ್ಮಿಕರು ಮತ್ತು ಸ್ವಚ್ಛತಾ ನೌಕರರಿಗೂ ಅನ್ವಯವಾಗುವಂತೆ ವಿಸ್ತರಿಸುವ ಬಗ್ಗೆ ಕೂಡಲೇ ಕ್ರಮಕೈಗೊಳ್ಳುವ ಭರವಸೆ ನೀಡಲಾಗಿದೆ. 2017-2018 ರಲ್ಲಿ ರಚಿಸಲಾಗಿರುವ ಪೌರ ಕಾರ್ಮಿಕರ ನೇಮಕಾತಿ ವಿಶೇಷ ನಿಯಮಾವಳಿಗಳನ್ನು ಪುನರ್ ಪರಿಶೀಲಿಸಲು ಅನುಕೂಲವಾಗುವಂತೆ ಈಗಾಗಲೇ ಕರ್ತವ್ಯದಲ್ಲಿರುವ ಪೌರಕಾರ್ಮಿಕರು ಮತ್ತು ಸ್ವಚ್ಛತಾ ಕಾರ್ಮಿಕರ ಸೇವಾ ವಿವರಗಳನ್ನು ಒಂದು ವಾರದ ಒಳಗಾಗಿ ಸಂಗ್ರಹಿಸಿ ಅಗತ್ಯ ಶಿಫಾರಸುಗಳೊಂದಿಗೆ ಕಡತ ಮಂಡಿಸಲು ಸಚಿವ ಎಂಟಿಬಿ ನಾಗರಾಜ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ:ಇಂದಿನಿಂದ ಮಹಾನಗರದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ; ನಿಯಮ ಮೀರಿದರೆ ದಂಡವೆಷ್ಟು ಗೊತ್ತಾ?!

ABOUT THE AUTHOR

...view details