ಬೆಂಗಳೂರು:ಬ್ಯಾಂಕುಗಳು ಸೂಕ್ತ ಭದ್ರತೆ ಇಲ್ಲದೆ ಭಾರಿ ಪ್ರಮಾಣದ ಸಾಲ ವಿತರಿಸುತ್ತಿರುವುದು ತೀವ್ರ ಆತಂಕಕಾರಿ ಬೆಳವಣಿಗೆ. ಸಾಲ ವಿತರಣೆ ನಿಯಮಗಳನ್ನು ರೂಪಿಸುವವರು ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ಈ ಕುರಿತು ಗಮನ ಹರಿಸುವುದು ಸೂಕ್ತ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಬ್ಯಾಂಕ್ ಆಫ್ ಬರೋಡ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ತಮ್ಮ ವಿರುದ್ಧ ಹೊರಡಿಸಿರುವ ಲುಕ್ ಔಟ್ ಸರ್ಕ್ಯೂಲರ್ ಹಾಗೂ ಅಬುದಾಬಿಗೆ ಪ್ರಯಾಣಿಸಲು ಅನುಮತಿ ನಿರಾಕರಿಸಿರುವ ಬ್ಯೂರೋ ಆಫ್ ಇಮಿಗ್ರೇಷನ್ ಆದೇಶವನ್ನು ರದ್ದುಪಡಿಸುವಂತೆ ಕೋರಿ ಉದ್ಯಮಿ ಡಾ.ಬಿ.ಆರ್.ಶೆಟ್ಟಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಬಿ. ಆರ್. ಶೆಟ್ಟಿ ಅವರ ಅರ್ಜಿ ವಜಾಗೊಳಿಸಿರುವ ನ್ಯಾ. ಪಿ.ಎಸ್. ದಿನೇಶ್ ಕುಮಾರ್ ಅವರು, ವಿದೇಶಕ್ಕೆ ಪ್ರಯಾಣಿಸಲು ದೇಶದ ಪ್ರತಿಯೊಬ್ಬ ಪ್ರಜೆಗೂ ಹಕ್ಕು ಇದೆ. ಆದರೆ, ಸಾರ್ವಜನಿಕ ಹಣವನ್ನು ತೆಗೆದುಕೊಳ್ಳುವ ವ್ಯಕ್ತಿಗಳು ಅದನ್ನು ಮರುಪಾವತಿಸುವ ಮೂಲಕ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ಸ್ಪಷ್ಟಪಡಿಸಿದೆ.
ಅಲ್ಲದೆ, ಸರ್ಕಾರಿ ವಲಯದ ಬ್ಯಾಂಕುಗಳು ಸೂಕ್ತ ಭದ್ರತೆ ಇಲ್ಲದೇ ಭಾರಿ ಪ್ರಮಾಣದಲ್ಲಿ ಸಾಲ ವಿತರಿಸಿದರೆ, ಅದು ದೇಶದ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ, ಬ್ಯಾಂಕುಗಳು ಸಾಲ ನೀಡುವ ನಿಯಮಗಳು, ಈ ಬಗ್ಗೆ ಶಾಸನ ರೂಪಿಸುವವರು ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ಇತ್ತ ಗಮನ ಹರಿಸಬೇಕು. ಸಾರ್ವಜನಿಕರ ಹಣಕ್ಕೆ ಸೂಕ್ತ ಭದ್ರತೆ ಇರುವುದನ್ನು ಖಾತರಿಪಡಿಸಿಕೊಳ್ಳುವ ಸಂಬಂಧ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪೀಠ ಆರ್ಬಿಐಗೆ ಸಲಹೆ ನೀಡಿದೆ.
ಉದ್ಯಮಿ ಬಿ.ಆರ್. ಶೆಟ್ಟಿ ತಮ್ಮ ಕಂಪನಿಗಳಿಗೆ ಪಡೆದುಕೊಂಡಿರುವ 2,800 ಕೋಟಿ ರೂ. ಮರು ಪಾವತಿಸಲು ವಿಫಲವಾಗಿದ್ದರು. ಈ ಹಿನ್ನೆಲೆ ಶೆಟ್ಟಿ ವಿರುದ್ಧ ಬ್ಯಾಂಕ್ ಆಫ್ ಬರೋಡ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ಗಳು ಲುಕ್ ಔಟ್ ಸರ್ಕ್ಯೂಲರ್ ಹೊರಡಿಸಿದ್ದವು. ಇನ್ನು ಅಬುದಾಬಿಗೆ ಪ್ರಯಾಣಿಸದಂತೆ ಅನುಮತಿ ನಿರಾಕರಿಸಿ ಬ್ಯೂರೋ ಆಫ್ ಇಮಿಗ್ರೇಷನ್ ಹಿಂಬರಹ ನೀಡಿತ್ತು. ಬ್ಯಾಂಕ್ಗಳ ಸರ್ಕ್ಯೂಲರ್ ಹಾಗೂ ಇಮಿಗ್ರೇಷನ್ ಆದೇಶಗಳನ್ನು ರದ್ದುಪಡಿಸುವಂತೆ ಕೋರಿ ಶೆಟ್ಟಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.